ನವೆಂಬರ್ ಕ್ರಾಂತಿ ಮುನ್ಸೂಚನೆ: ಆರ್.ಅಶೋಕ್ | Cong govt infighting rise

r ashoka
Published on

ಬೆಂಗಳೂರು: ಆಡಳಿತ ಕಾಂಗ್ರೆಸ್ ಪಕ್ಷದಲ್ಲಿ ಕಂಪನ ಶುರುವಾಗಿದೆ. ಸಚಿವರು, ಆಡಳಿತ ಪಕ್ಷದ ಶಾಸಕರ ಹೇಳಿಕೆ ಗಮನಿಸಿದರೆ ನವೆಂಬರ್ ಕ್ರಾಂತಿ ಮುನ್ಸೂಚನೆಯಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಿಶ್ಲೇಷಿಸಿದರು.

ವಿಧಾನಸೌಧದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಚರ್ಚೆ, ಅಧಿಕಾರ ಹಂಚಿಕೆ, ನವೆಂಬರ್ ಕ್ರಾಂತಿಕ ಬಗ್ಗೆ ನಾವು ಹೇಳಿದಾಗ ಪ್ರತಿಪಕ್ಷಗಳ ಭ್ರಾಂತಿ ಎಂದು ಟೀಕಿಸುತ್ತಿದ್ದವರು, ಸಚಿವರು ಹಾಗೂ ಸ್ವಪಕ್ಷದ ಶಾಸಕರ ಹೇಳಿಕೆಗಳ ಬಗ್ಗೆ ಏನು ಹೇಳುತ್ತಾರೆ ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಿರ್ಧಾರದ ಪ್ರಕಾರ ಸಿದ್ದರಾಮಯ್ಯ ಐದು ವರ್ಷಗಳಿಗೆ ಸಿಎಂ ಆಗಿದ್ದಾರೆ ಎಂದುಕೊಂಡಿದ್ದೆವು. ಆದರೆ ಈಗ ಸಿದ್ದರಾಮಯ್ಯ ಅವರೇ ಹೈಕಮಾಂಡ್ ಹೇಳಿದರೆ ಐದು ವರ್ಷ ನಾನೇ ಸಿಎಂ ಎಂದಿದ್ದು, ಅಧಿಕಾರ ಹಂಚಿಕೆ ಒಪ್ಪಂದವಾದಂತಿದೆ ಎಂಬ ಅನುಮಾನ ವ್ಯಕ್ತಪಡಿಸಿದರು.

ಎರಡೂ ವರ್ಷಕ್ಕೆ ಅಗ್ರಿಮೆಂಟ್, ಸೆಟ್ಲ್‌ಮೆಂಟ್, ಪೇಮೆಂಟ್ ಆಗಿರಬೇಕು. ಹೀಗಾಗಿ 100 ಮೀಟರ್ ಓಟದ ಸ್ಪರ್ಧೆ ನಡೆಯುತ್ತಿದ್ದು, ಯಾರು ಸೆಟ್ಲ್‌ಮೆಂಟ್ ಆಗುತ್ತಾರೋ ಅವರೇ ಸಿಎಂ ಆಗುತ್ತಾರೆ ಎಂದು ಆರ್.ಅಶೋಕ್ ಅಣಕವಾಡಿದರು.

ಜನರ ಮನೆ ಹಾಳಾಗದಿರಲಿ

ನಾಯಕತ್ವ ಬದಲಾಗುತ್ತದೋ ಮುಂದುವರಿಯುತ್ತದೆಯೋ ಅವರಿಗೆ ಬಿಟ್ಟದ್ದು. ಕಾಂಗ್ರೆಸ್ ಮನೆ ಹಾಳಾಗಲಿ, ನಾಡು, ನಾಡಿನ ಜನರ ಮನೆ ಹಾಳಾಗದಿರಲಿ ಎಂದ ಆರ್.ಅಶೋಕ್, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ, ಆಡಳಿತವನ್ನು ಮರೆತುಬಿಟ್ಟಿದೆ ಎಂದು ವಾಗ್ದಾಳಿ ಮಾಡಿದರು.

ಶಾಸಕರ ಕ್ಷೇತ್ರಗಳ ಅಭಿವೃದ್ಧಿ ಅನುದಾನ ಬಿಡುಗಡೆಯಾಗಲಿಲ್ಲ. ರಸ್ತೆಗಳ ಸುಧಾರಣೆಯಿಲ್ಲ. ನೆರೆಗೆ ಹಾನಿಯಾದ ಬೆಳೆಗಳಿಗೆ ಪರಿಹಾರ ವಿತರಿಸುತ್ತಿಲ್ಲ. ಬೆಂಬಲ ಬೆಲೆ ಯೋಜನೆಯಡಿ ಆಹಾರಧಾನ್ಯ ಖರೀದಿಯೂ ಶುರುವಾಗಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಮಿಷನ್ ಸ್ಕೀಮ್

ಬೆಂಗಳೂರಿಗೆ ಸುರಂಗ ರಸ್ತೆ ಮಾರ್ಗದ ಯೋಜನೆ ಸೂಕ್ತವಲ್ಲ. ತಯಾರಿಸಿದ ವಿಸ್ತೃತ ಯೋಜನಾ ವರದಿಯಲ್ಲಿ ಲೋಪಗಳನ್ನು ತಜ್ಞರು ಎತ್ತಿ ತೋರಿಸಿದ್ದಾರೆ. ಆದರೂ ದುಡ್ಡು ಹೊಡೆಯುವುದಕ್ಕಾಗಿ ಈ ಯೋಜನೆಗೆ ಸರ್ಕಾರ ಜೋತು ಬಿದ್ದಿದೆ ಎಂದು ಆರೋಪಿಸಿದರು.

ಎಷ್ಟೇ ಹಣ ಸುರಿದರೂ ಈ ಯೋಜನೆ ಪೂರ್ಣಗೊಳಿಸಲು ಸಾಧ್ಯವಿಲ್ಲ, ಪರಿಸರ ವ್ಯವಸ್ಥೆ ಮೇಲೆ ಅಡ್ಡಪರಿಣಾಮಬೀರಲಿದೆ. ಶುದ್ಧ ಗಾಳಿ ಕಸಿದು, ಜನರ ಅತ್ಯಧಿಕ ಟೋಲ್ ಭಾರ ಹೊರಿಸುವ ಈ ಯೋಜನೆ ಕೈಬಿಡಲೇಬೇಕು ಎಂದು ಆರ್.ಅಶೋಕ್ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net