ಸೌತ್ ಕ್ಯಾರೋಲಿನದಲ್ಲಿ ನವೆಂಬರ್ 'ಕನ್ನಡ ಪರಂಪರೆಯ ತಿಂಗಳು' ಎಂದು ಘೋಷಣೆ; ಜೊತೆಗೆ ಅದ್ಧೂರಿ ಕನ್ನಡ ರಾಜ್ಯೋತ್ಸವ, ದೀಪಾವಳಿ ಆಚರಣೆ

South Carolina F
Published on

| ಬೆಂಕಿ ಬಸಣ್ಣ ನ್ಯೂಯಾರ್ಕ್
"ಮಾಮ.. ನೀವು ನಮ್ಮೂರಿನಲ್ಲಿ ನಡೆಯುವ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವಕ್ಕೆ ಬರಲೇಬೇಕೆಂದು" ನನ್ನ ಅಕ್ಕನ ಮಗಳು ಗಾಯಿತ್ರಿ ಒತ್ತಾಯಿಸಿದಾಗ ಈಗ ಅಮೆರಿಕ ಪ್ರವಾಸದಲ್ಲಿರುವ ನನ್ನ ತಂದೆಯವರನ್ನು ಮತ್ತು ಇತ್ತೀಚೆಗೆ ಮದುವೆಯಾದ ಅರ್ಪಿತಾ ಮತ್ತು ಪವನ್ ಅವರನ್ನು ಕರೆದುಕೊಂಡು ಸೌತ್ ಕಾರೋಲಿನ ರಾಜ್ಯದ ಗ್ರೀನ್ವಿಲ್ಲಗೆ ಹೋದೆನು.

ಸೌತ್ ಕಾರೋಲಿನ ರಾಜ್ಯದ ಗ್ರೀನ್ವಿಲ್ ಒಂದು ಚಿಕ್ಕ ಪಟ್ಟಣವಾಗಿದ್ದು ಇಲ್ಲಿಯ ಕನ್ನಡಿಗರೆಲ್ಲರೂ ಒಂದೇ ಕುಟುಂಬದವರ ತರಹ ಅತ್ಯಂತ ಅನ್ಯೋನ್ಯವಾಗಿದ್ದಾರೆ. ಇದು ನಮ್ಮ ನ್ಯೂಯಾರ್ಕ್ ರಾಜ್ಯದ ಅಲ್ಮನಿ ತರಹವೇ ನನಗೆ ತುಂಬಾ ಆಪ್ತವಾಯಿತು. ಇಲ್ಲಿಯ ಕನ್ನಡಿಗರ ಪ್ರೀತಿ ವಾತ್ಸಲ್ಯದಿಂದ ನಾನು ಹೊರಗಡೆಯವನು ಅನ್ನಿಸಲೇ ಇಲ್ಲ.

2007ರಲ್ಲಿ ಸಂಜಯ್ ಮತ್ತು ಇತರ ಮುಖಂಡರು ಸ್ಥಾಪಿಸಿದ ಗ್ರೀನ್ವಿಲ್ ಕನ್ನಡ ಸಂಘ ಸತತವಾಗಿ ಬೆಳೆಯುತ್ತಲೇ ಬಂದಿದೆ. ಅನೇಕ ದೇಶಗಳ ಭಾಷೆ ಹಾಗು ಸಂಸ್ಕೃತಿಗಳನ್ನು ಕಾಣುತ್ತಿರುವ ಅಮೇರಿಕಾದಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನೂ ಶ್ರೀಮಂತಗೊಳಿಸುವಲ್ಲಿ ಕನ್ನಡ ಹಾಗೂ ಕನ್ನಡಿಗರ ಪಾತ್ರವನ್ನು ಗುರುತಿಸಿ, ಅಮೆರಿಕದ ದಕ್ಷಿಣ ಕ್ಯಾರೊಲಿನ ರಾಜ್ಯದ ಗವರ್ನರ್ ಹೆನ್ರಿ ಮ್ಯಾಕ್ ಮಾಸ್ಟರ್ ಅವರು ನವೆಂಬರ್ ತಿಂಗಳನ್ನು "ಕನ್ನಡ ಭಾಷೆ, ಪರಂಪರೆಯ ತಿಂಗಳು" ಎಂದು ಘೋಷಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ನಮಗೆ ಘೋಷಣಾ ಪತ್ರ ದೊರೆತಿದ್ದು ಕನ್ನಡಕ್ಕೆ ಸ್ಥಳೀಯ ರಾಜ್ಯ ಸರಕಾರ ನೀಡಿದ ಗೌರವ ಇದಾಗಿದೆ ಎಂದು ದಕ್ಷಿಣ ಕ್ಯಾರೊಲಿನ ರಾಜ್ಯದ ಕನ್ನಡ ಅಸೋಸಿಯೇಷನ್ ಆಫ್ ಗ್ರೀನ್ವಿಲ್ಲೆ ಕನ್ನಡ ಸಂಘದ ಅಧ್ಯಕ್ಷ ಡಾI ಶಿವಕುಮಾರ್ ಬಸವನಹಳ್ಳಿ ಅವರು ಸಂತಸ ವ್ಯಕ್ತಪಡಿಸಿದರು.

ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಸ್ಥಳೀಯ ಸರಕಾರ ಗುರುತಿಸಿರುವುದು ಕನ್ನಡಿಗರೆಲ್ಲರೂ ಸಂತಸ ಪಡುವ ಸಂಗತಿಯಾಗಿದೆ ಮತ್ತು ದಕ್ಷಿಣ ಕ್ಯಾರೊಲಿನ ರಾಜ್ಯದ ಕನ್ನಡಿಗರಿಗೆ ಇದು ನಿಜವಾದ ಅರ್ಥದಲ್ಲಿ ಕನ್ನಡ ಮತ್ತು ಕರ್ನಾಟಕ ಸಂಸ್ಕೃತಿಯ ಸಂಭ್ರಮಾಚರಣೆ ಎಂದು ಬಣ್ಣಿಸಿದರು.

ಶುಕ್ರವಾರ ಸಂಜೆ ಅಲ್ಲಿಯ ಹಿಂದೂ ದೇವಸ್ಥಾನದ ವಿಶಾಲ ಪಾರ್ಕಿಂಗ್ ಪ್ರದೇಶದಲ್ಲಿ ಚಿಕ್ಕ ಮಕ್ಕಳು, ತಂದೆ ತಾಯಿಯಂದಿರು ಮತ್ತು ಹಿರಿಯರು ಪಟಾಕಿಗಳನ್ನು ಹೊಡೆದು ಸಂಭ್ರಮಿಸಿದರು. ಜೊತೆಗೆ ಕರ್ನಾಟಕದ ಮೊದಲ ರಾಪರ್ ಚಂದನ್ ಶೆಟ್ಟಿ ಅವರೊಂದಿಗೆ ಮೀಟ್ ಆ್ಯಂಡ್​ ಗ್ರೀಟ್ ವಿಶೇಷ ಭೋಜನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸ್ಥಳೀಯ ಕನ್ನಡ ಸಂಘಕ್ಕೆ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು ಮತ್ತು ಮುಂದಿನ ವರ್ಷದ ಆಯೋಜನ ಸಮಿತಿ ಪರಿಚಯಿಸಲಾಯಿತು.

ದೀಪಾವಳಿ ಮತ್ತು ಕರ್ನಾಟಕ ರಾಜ್ಯೋತ್ಸವ ಆಯೋಜಿಸಲು ಇಲ್ಲಿಯ ಕನ್ನಡ ಸಂಘದ ಅಧ್ಯಕ್ಷ ಡಾ.ಶಿವಕುಮಾರ್, ಉಪಾಧ್ಯಕ್ಷ ಮಂಜುನಾಥ್ ಜಿಎಸ್, ಸಾಂಸ್ಕೃತಿಕ ಕಾರ್ಯಕ್ರಮಗಳ ಛೇರ್ಮನ್ ನೀತು ಶಿವಣ್ಣ, ಸುಮಾ ಭಟ್ ಮುಂತಾದವರು ಶ್ರಮಿಸಿದ್ದಾರೆ. ಗಾಯತ್ರಿ ಬಸವರಾಜ್, ರಾಜಿ ತೆಲ್ಲೂರ, ಮತ್ತು ರೂಪ ಕುಲಕರ್ಣಿ ಹಾಕಿದ ರಂಗೋಲಿಗಳು ನೋಡುಗರ ಮನ ಸೆಳೆದವು.

ಮರುದಿನ ಶನಿವಾರ ಸಂಜೆ ಬಿಗ್ ಬಾಸ್ ಸೀಸನ್ 5 ವಿಜೇತ, ಕರ್ನಾಟಕದ ಪ್ರಸಿದ್ಧ ಪಾಪ್ ಸಿಂಗರ್, ಸಂಗೀತ ಸಂಯೋಜಕ ಚಂದನ್ ಶೆಟ್ಟಿಯವರು ತಮ್ಮ ಜನಪ್ರಿಯ 3 ಪೆಗ್, ಹಾಳಾಗೋದೆ, ಚಾಕಲೇಟ್ ಗರ್ಲ್, ತಕೀಲಾ ಹೀಗೆ ಅನೇಕ ಗಾಯನಗಳಿಂದ ಪ್ರೇಕ್ಷಕರನ್ನು ರಂಜಿಸಿದರು. ಇಲ್ಲಿಯ ಜನತೆ ಹುಚ್ಚೆದ್ದು ಕುಣಿದು ಕುಪ್ಪಳಿಸುವಂತೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರೇ ತಯಾರಿಸಿದ ಕನ್ನಡ ನಾಡಿನ ಮೃಷ್ಟಾನ್ನ ಭೋಜನವನ್ನು ಏರ್ಪಡಿಸಲಾಗಿತ್ತು. ನಾವೆಲ್ಲರೂ "ಪಾನ್ ಬೀಡಾ" ತಿಂದಿರುತ್ತೇವೆ. ಆದರೆ ನಾನು "ಪಾನ್ ಲಡ್ಡು" ಎಂಬ ವಿಶೇಷ ಸ್ವೀಟ್ ನೋಡಿ ಅಚ್ಚರಿಗೊಂಡೆನು. ರಾಮಚಂದ್ರ ಏಕಬೋಟೆ ಅವರ ಪತ್ನಿ ಶೈಲಜಾ ತಯಾರಿಸಿದ ಹಸಿರು ಜಾಮೂನಿನಂತೆ ಕಾಣುತ್ತಿದ್ದ, ವೀಳ್ಯದೆಲೆಯಿಂದ ತಯಾರಿಸಿದ "ಪಾನ್ ಲಡ್ಡು " ಎಂಬ ವಿಶೇಷ ಖಾದ್ಯ ಎಲ್ಲರ ಮೆಚ್ಚುಗೆ ಪಡೆಯಿತು. ಇದನ್ನು ವೀಳ್ಯದೆಲೆ ರಸ, ಡ್ರೈ ಫ್ರೂಟ್ಸ್, ಗಟ್ಟಿ ಹಾಲು, ಒಣ ಕೊಬ್ಬರಿ ಮುಂತಾದವುಗಳನ್ನು ಹಾಕಿ ತಯಾರಿಸಲಾಗುತ್ತದೆ.

ಮರುದಿನ ರವಿವಾರ ರೇಷ್ಮಾ ಅಚ್ಚುತ ಅವರ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಇಲ್ಲಿಯ ಹೆಮ್ಮೆಯ ಕನ್ನಡಿಗರನ್ನು ಮತ್ತೊಮ್ಮೆ ಭೇಟಿಯಾಗುವ ಸುವರ್ಣ ಅವಕಾಶ ನನಗೆ ಸಿಕ್ಕಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net