

ನ್ಯೂಯಾರ್ಕ್: ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷೀಲಿ ಅಂದಂತೆ ಮಹಾಮಾರಿ ಕರೊನಾ ವೈರಸ್ ಎರಡನೇ ಅಲೆ ದೇಶದಲ್ಲಿ ತೀವ್ರವಾಗಿದ್ದು, ಕಡಿಮೆಯಾಗ್ತಿದ್ದ ಸೋಂಕಿನ ಪ್ರಕರಣಗಳು ಇದೀಗ ದಿನೇದಿನೆ ಹೆಚ್ಚಾಗುತ್ತಿವೆ. ಆದ್ದರಿಂದ ಜನರಲ್ಲಿ ಆತಂಕವೂ ಹೆಚ್ಚಾಗಿದೆ.
ಇವೆಲ್ಲದರ ನಡುವೆ ಕರೊನಾ ಕುರಿತಾದ ಮತ್ತೊಂದು ಸಂಶೋಧನಾ ವರದಿ ಬಹಿರಂಗವಾಗಿದೆ. ಕೋವಿಡ್ -19ಗೆ ಕಾರಣವಾಗಿರುವ SARS-CoV-2 ವೈರಸ್, ಬಾಯಿಯಲ್ಲಿರುವ ಕೋಶಗಳಿಗೆ ಸೋಂಕು ತಗಲಿಸುತ್ತದೆ ಎಂಬುದಕ್ಕೆ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ಪುರಾವೆಗಳನ್ನು ಕಂಡುಹಿಡಿದಿದೆ.
ದೇಹದಲ್ಲಿನ ಮೇಲ್ಭಾಗದ ವಾಯುಮಾರ್ಗಗಳು ಮತ್ತು ಶ್ವಾಸಕೋಶಗಳು ಕರೊನಾ ವೈರಸ್ ಸೋಂಕಿನ ಪ್ರಮುಖ ತಾಣಗಳು ಎಂಬುದು ಎಲ್ಲರಿಗು ತಿಳಿದಿರುವು ವಿಚಾರವಾಗಿದೆ. ಆದರೆ, ದೇಹದ ಇತರೆ ಭಾಗಗಳ ಕೋಶಗಳ ಮೇಲೂ ವೈರಸ್ ಸೋಂಕು ತಗಲುತ್ತದೆ ಎಂಬುದರ ಸುಳಿವು ಸಹ ಇದೆ. ಜೀರ್ಣ ವ್ಯವಸ್ಥೆ, ರಕ್ತ ನಾಳಗಳು, ಕಿಡ್ನಿಗಳು ಸೇರಿದಂತೆ ಮುಂತಾದ ಅಂಗಗಳ ಮೇಲೂ ಕರೊನಾ ವೈರಸ್ ಪ್ರಭಾವ ಬೀರುತ್ತದೆ ಎಂದು ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ಚಾಪೆಲ್ ಹಿಲ್ನಲ್ಲಿರುವ ಉತ್ತರ ಕೆರೊಲಿನಾ ವಿಶ್ವವಿದ್ಯಾಲಯದ ವಿಜ್ಞಾನಿಗಳ ನೇತೃತ್ವದಲ್ಲಿ ಹೊಸ ಅಧ್ಯಯನವು ತಿಳಿಸಿದೆ.
ದೇಹದ ಅನೇಕ ಭಾಗಗಳಿಗೆ ಸೋಂಕು ತಗಲುವ ವೈರಸ್ ಸಾಮರ್ಥ್ಯವು, ಕರೊನಾ ರೋಗಿಗಳು ಅನುಭವಿಸಿದ ವ್ಯಾಪಕವಾದ ರೋಗಲಕ್ಷಣಗಳನ್ನು ವಿವರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಬಾಯಿಯ ಲಕ್ಷಣಗಳಾದ ರುಚಿ ನಷ್ಟ, ಬಾಯಿ ಒಣಗುವುದು ಮತ್ತು ಬಾಯಿಯಲ್ಲಿನ ಗುಳ್ಳೆಗಳು ಸಹ ಸೇರಿವೆ.
ಈ ಸಂಶೋಧನಾ ವರದಿಯು ನೇಚರ್ ಮೆಡಿಶಿನ್ ಜರ್ನಲ್ನಲ್ಲಿ ಪ್ರಕಟವಾಗಿದೆ. ಇದರಲ್ಲಿರುವ ಪ್ರಮುಖ ಅಂಶವೇನೆಂದರೆ, ಸೋಂಕಿತ ವ್ಯಕ್ತಿಯ ಬಾಯಿಯ ಕೋಶಗಳಿಂದ ವೈರಸ್ ತುಂಬಿದ ಸಲೈವಾದೊಂದಿಗೆ ಕರೊನಾ ವೈರಸ್ ಶ್ವಾಶಕೋಸ ಮತ್ತು ಜೀರ್ಣಾಂಗ ವ್ಯವಸ್ಥೆ ಮೇಲೆ ದಾಳಿ ಮಾಡಲು ಬಾಯಿಯು ಪ್ರಮುಖ ಪಾತ್ರವಹಿಸುತ್ತದೆ.
ಹೀಗಾಗಿ ವೈರಸ್ ಪ್ರಭಾವದಲ್ಲಿ ಬಾಯಿಯ ಒಳಗೊಳ್ಳುವಿಕೆಯ ಉತ್ತಮ ತಿಳುವಳಿಕೆಯು ದೇಹದ ಒಳಗೆ ಮತ್ತು ಹೊರಗೆ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುವ ತಂತ್ರಗಳನ್ನು ತಿಳಿಸಿ ಕೊಡುತ್ತದೆ. (ಏಜೆನ್ಸೀಸ್)