ಕಳ್ಳತನಕ್ಕೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಕುಖ್ಯಾತಿ ಬಂಧನ

ದೇಶದ ವಿವಿಧ ರಾಜ್ಯಗಳಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತಿಯೋರ್ವನನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಂತಾರಾಜ್ಯ ಕಳ್ಳ
ಅಂತಾರಾಜ್ಯ ಕಳ್ಳ
Published on

ಬೆಂಗಳೂರು: ದೇಶದ ವಿವಿಧ ರಾಜ್ಯಗಳಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿ ಮನೆ ಕಳ್ಳತನ ಮಾಡುತ್ತಿದ್ದ ಕುಖ್ಯಾತಿಯೋರ್ವನನ್ನು ವಿಲ್ಸನ್‌ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೆಲಂಗಾಣ ಮೂಲದ ವಿನೋದ್ ಕುಮಾರ್ ಅಲಿಯಾಸ್ ನೆನಾವತ್ (38) ಬಂಧಿತ. ಆರೋಪಿಯಿಂದ 42 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ವಿದೇಶಿ ಕರೆನ್ಸಿ, ಐಪ್ಯಾಡ್ ವಶಕ್ಕೆ ಪಡೆದಿದ್ದಾರೆ. ಆ.31ರಂದು ಬೀಗ ಹಾಕಿದ ಮನೆಯ ಕಿಟಕಿ ಸರಳನ್ನು ಮುರಿದು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

30 ಪ್ರಕರಣದಲ್ಲಿ ಬೇಕಾಗಿದ್ದ ಕುಖ್ಯಾತಿ:

ಆರೋಪಿ ವಿರುದ್ಧ ತೆಲಂಗಾಣದಲ್ಲಿ 29, ಯುಪಿನಲ್ಲಿ 1 ಪ್ರಕರಣ ಸೇರಿ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ, ಇದುವರೆಗೆ ಆರೋಪಿ ಪೊಲೀಸರ ಕೈಯಲ್ಲಿ ಸಿಕ್ಕಿರಲಿಲ್ಲ. ಬೆಂಗಳೂರಿನ ವಿಲ್ಸನ್ ಗಾರ್ಡನ್ ಸರಹದ್ದಿನ 10ನೇ ಕ್ರಾಸ್ ಬಳಿಯ ಮನೆ ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ. ಈ ವೇಳೆ ರ‌್ಯಾಪಿಡೋ ಬುಕ್ ಮಾಡಿದ್ದಾನೆ. ಇದೇ ಆದಾರದ ಮೇಲೆ ಪೊಲೀಸರು ಮೊಬೈಲ್ ಟವರ್ ಲೋಕೆಷನ್ ಮೂಲಕ ಆರೋಪಿ ವಾರಣಾಸಿಯಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ.

ಆರೋಪಿ ಮೊಬೈಲ್ ನಂಬರ್ ಪತ್ತೆಯಾದ ಮರುದಿನವೇ ದೆಹಲಿಯಿಂದ ವಾರಣಾಸಿಗೆ ವಿಮಾನದಲ್ಲಿ ಹೋಗಿ ನಂತರ ಮತ್ತೆ ವಿಮಾನದಲ್ಲಿ ಬಂದಿದ್ದಾನೆ. ಈ ವೇಳೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

10 ವರ್ಷಗಳಿಂದ ಕಳ್ಳತನ:

ಬಿ.ಟೆಕ್ ವ್ಯಾಸಂಗ ಅರ್ಧಕ್ಕೆ ನಿಲ್ಲಿಸಿದ್ದ ಆರೋಪಿ, ಕಳೆದ 10 ವರ್ಷಗಳಿಂದ ಕಳ್ಳತನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ. ದೆಹಲಿ, ವಾರಣಾಸಿ, ತೆಲಂಗಾಣದಲ್ಲಿ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ. ಕಳ್ಳತನ ಮಾಡಿದ ಹಣ, ಚಿನ್ನಾಭರಣ ಮಾರಾಟ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದ.

ಬೆಂಗಳೂರಿಗೆ ಬಂದಿದ್ದ ಆರೋಪಿ ಬಾಡಿಗೆ ಬೈಕ್‌ನಲ್ಲಿ ವಿವಿಧ ಪ್ರದೇಶಗಳಲ್ಲಿ ಸುತ್ತಾಟ ನಡೆಸುತ್ತಿದ್ದ. ಹಳೇ ಮನೆಗಳು ಹಾಗೂ ವೃದ್ಧರು ಮತ್ತು ಒಂಟಿ ಮಹಿಳೆ, ಪುರುಷರು ವಾಸವಾಗಿರುವ ಮನೆಗಳನ್ನು ಗುರಿಸುತ್ತಿದ್ದ. ಅದೇ ಮನೆಗೆ ರಾತ್ರಿ ವೇಳೆ ಕಟರ್ ಹಾಗೂ ಇತರೆ ವಸ್ತುಗಳ ಸಮೇತ ನುಗ್ಗಿ ಕಳವು ಮಾಡಿ ವಿಮಾನದಲ್ಲೇ ಪರಾರಿಯಾಗುತ್ತಿದ್ದ.

ನಕಲಿ ಪಾಸ್‌ಪೋರ್ಟ್

ಆರೋಪಿ ವಿನೋದ್ ಕುಮಾರ್ ನಕಲಿ ಪಾಸ್‌ಪೋರ್ಟ್ ಪಡೆದು, ಫ್ರಾನ್, ಜರ್ಮನಿ ಮತ್ತು ಇಟಲಿಯಲ್ಲಿ ಕೆಲಕಾಲ ಅಡುಗೆ ಕೆಲಸ ಮಾಡಿಕೊಂಡಿದ್ದ. ನಕಲಿ ದಾಖಲೆಗಳನ್ನು ಬಳಸಿ ನೇಪಾಳ ಗಡಿಯ ಮೂಲಕ ಭಾರತಕ್ಕೆ ಮರಳಿದ್ದ ಆರೋಪಿ 2019ರಿಂದ ಮತ್ತೆ ಕಳ್ಳತನ ಆರಂಭಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಬಾಂಗ್ಲಾದೇಶದ ಯುವತಿಯೊಂದಿಗೆ ವಿವಾಹ

ಆನ್‌ಲೈನ್ ಮೂಲಕ ಬಾಂಗ್ಲಾದೇಶದ ಯುವತಿಯನ್ನು ಪರಿಚಯಿಸಿಕೊಂಡಿದ್ದ ಆರೋಪಿ ವಿನೋದ್ ಕುಮಾರ್ ಆಕೆಯನ್ನು ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ. ಕಳೆದ 9 ವರ್ಷಗಳಿಂದ ಅವನು ಬಾಂಗ್ಲಾದೇಶದಲ್ಲೇ ವಾಸಿಸುತ್ತಿದ್ದ. ಪ್ರಸ್ತುತ ಅವನ ಪತ್ನಿ ಬಾಂಗ್ಲಾದೇಶದಲ್ಲೇ ನೆಲೆಸಿದ್ದಾಳೆ. ವಿನೋದ್ ಕುಮಾರ್ ಮೂರು ತಿಂಗಳಿಗೊಮ್ಮೆ ಬಾಂಗ್ಲಾದೇಶದ ಢಾಕಾಕ್ಕೆ ತೆರಳಿ ಮರಳಿ ಬರುತ್ತಿದ್ದಾನೆ. ಆಕೆ ಸಹ ಆಗಾಗ್ಗೆ ತೆಲಂಗಾಣಕ್ಕೆ ಬಂದು ಹೋಗುತ್ತಿದ್ದಾಳೆ ಎಂಬ ಸಂಗತಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಮಚಿಂದ್ರ ಹಾಕೆ, ಹಲಸೂರು ಗೇಟ್ ಉಪವಿಭಾಗದ ಎಸಿಪಿ ಎಸ್. ಸುಧೀರ್ ಹಾಗೂ ವಿಲ್ಸನ್ ಗಾರ್ಡನ್ ಠಾಣಾಧಿಕಾರಿ ಕೆ. ಪ್ರಕಾಶ್ ಮತ್ತು ಅವರ ತಂಡ ಈ ಕಾರ್ಯಾಚರಣೆಯನ್ನು ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net