ಕಸಾಪ ಜಿಲ್ಲಾಧ್ಯಕ್ಷ ಮಂಜುನಾಥ್‌ಗೆ ನೋಟಿಸ್

kasapa manjunath
ಕಸಾಪ ಜಿಲ್ಲಾಧ್ಯಕ್ಷ ಮಂಜುನಾಥ್‌
Published on

ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಗೌರವಗಳಿಗೆ ಧಕ್ಕೆ ತಂದಿರುವುದು ಹಾಗು ಧ್ಯೇಯೋದ್ದೇಶಗಳಿಗೆ ವಿರುದ್ಧವಾಗಿ ವರ್ತಿಸಿರುವ ಆರೋಪದ ಮೇಲೆ ಜಿಲ್ಲಾಧ್ಯಕ್ಷ ಡಿ.ಮಂಜುನಾಥ ಅವರ ಸದಸ್ಯತ್ವ ಅಮಾನತುಗೊಳಿಸುವ ಬಗ್ಗೆ ಅಧ್ಯಕ್ಷ ಡಾ. ಮಹೇಶ್ ಜೋಶಿ ಶೋಕಾಸ್ ನೋಟಿಸ್ ನೀಡಿದ್ದಾರೆ.

ಡಿ.ಮಂಜುನಾಥ್ ಅವರಿಗೆ ಸೂಕ್ತ ವಿವರಣೆ ನೀಡುವಂತೆ ಏಳು ದಿನಗಳ ಕಾಲಾವಕಾಶ ನೀಡಿ ಶುಕ್ರವಾರ ನೋಟಿಸ್ ನೀಡಿದ್ದು ತಮ್ಮ ಸದಸ್ಯತ್ವ (ಸಂಖ್ಯೆ-7867)ವನ್ನು ಅಮಾನತ್ತಿನಲ್ಲಿಡುವ ಬಗ್ಗೆ ಸುದೀರ್ಘ ಏಳು ಪುಟಗಳ ವಿವರಣೆ ನೀಡಿದ್ದಾರೆ. ಒಂದು ವೇಳೆ ವಿವರಣೆ ಅಥವಾ ಹೇಳಿಕೆ ನೀಡದಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿನ ನಿಬಂಧನೆ ಅನುಸಾರ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆ ನೀಡಿದ್ದಾರೆ. 2022ರಲ್ಲಿ ಕಸಾಪದ ವಿವಿಧ ವಿಷಯಗಳಿಗೆ ತಿದ್ದುಪಡಿ ತರಲು ಹೈಕೋರ್ಟ್ ನ್ಯಾಯಮೂರ್ತಿ ಅರಳಿ ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ರಚಿಸಿದ್ದ 11 ಸದಸ್ಯರ ಸಲಹಾ ಸಮಿತಿ ವರದಿಗೆ ಜಿಲ್ಲಾ ಹಾಗೂ ಗಡಿನಾಡು ಅಧ್ಯಕ್ಷರು ಸೇರಿ 30 ಮಂದಿ ಸಹಿ ಮಾಡಿರುವ ಪತ್ರವನ್ನು ಬಹಿರಂಗ ಪಡಿಸಲಾಗಿತ್ತು. ರಾಜ್ಯ ಸರ್ಕಾರ ನೀಡುವ ಜಿಲ್ಲಾ ನಿರ್ವಹಣೆ ಬಾಬ್ತು 68 ಸಾವಿರ ರೂ. ತಮ್ಮ ಖಾತೆಗೆ ಬಂದಿಲ್ಲ. ಕೊಡುವುದು ಮೂರು ಕಾಸು ಎಂದು ಜರಿದಿದ್ದರು. ಅಲ್ಲದೆ, 2004ರಿಂದ 2008ರವರೆಗೆ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಸಾಹಿತ್ಯ ಗ್ರಾಮಕ್ಕೆ ನೀಡಿದ್ದ 1 ಕೋಟಿ ರೂ. ಅನುದಾನವನ್ನು ಪರಿಷತ್ ಗಮನಕ್ಕೆ ತಾರದೇ ಬಿಡುಗಡೆ ಮಾಡಿಸಿಕೊಂಡಿದ್ದು, ಕಟ್ಟಡದ ಅನುಮತಿ, ಟೆಂಡರ್, ಖರ್ಚು ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿತ್ತು. 2023ರಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಡಿ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಅದು ಖಾಸಗಿ ಸಂಸ್ಥೆ. ಆದರೆ ಸಮ್ಮೇಳನದಲ್ಲಿ ಭಾಗವಹಿಸುವ ಶಿಕ್ಷಕರಿಗೆ ಒಒಡಿ ಸೌಲಭ್ಯ ಕಲ್ಪಿಸಲು ಪತ್ರ ಬರೆದಿದ್ದಾರೆ. ಖಾಸಗಿ ಸಂಸ್ಥೆಗಾಗಿ ಸಾಹಿತ್ಯ ಪರಿಷತ್ ಅನ್ನು ದುರುಪಯೋಗ ಪಡಿಸಿಕೊಂಡಿದ್ದೀರಿ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಜಿಲ್ಲೆಗೆ ಅನುದಾನ ನೀಡುವ ಬಗ್ಗೆ ಪತ್ರದ ಮುಖೇನ ಹಾಗು ಸಭೆಗಳಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಕಥೆ ಕಟ್ಟಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಸಾಹಿತ್ಯ ಚಟುವಟಿಕೆಗಳನ್ನು ಶಿವಮೊಗ್ಗ ಜಿಲ್ಲಾ ಪರಿಷತ್ ನಡೆಸುತ್ತಿದೆ. ಅದು ಅವರ ಕಣ್ಣಿಗೆ ಕಾಣುವುದಿಲ್ಲ. ಅವರನ್ನು ಯಾರೂ ಪ್ರಶ್ನೆ ಮಾಡಬಾರದಷ್ಟೆ. ನೋಟಿಸ್ ನನ್ನ ಕೈಸೇರಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಗಮನಿಸಿದ್ದೇನೆ. ನೋಟಿಸ್‌ಗೆ ಉತ್ತರ ಕೊಡುತ್ತೇನೆ. -ಡಿ.ಮಂಜುನಾಥ್,ಕಸಾಪ ಜಿಲ್ಲಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net