ಎಇಗೆ ಶೋಕಾಸ್ ನೋಟಿಸ್ ಜಾರಿಗೆ ಸೂಚನೆ

ckm karapatra
ಜಿಪಂನಲ್ಲಿ ನಡೆದ ಬರ ನಿರ್ವಹಣೆ ಕುರಿತ ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕೃಷಿ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕರಪತ್ರ ಬಿಡುಗಡೆಗೊಳಿಸಿದರು. ಭೈರತಿ ಸುರೇಶ್, ಎಚ್.ಡಿ.ತಮ್ಮಯ್ಯ, ಜಿ.ಎಚ್.ಶ್ರೀನಿವಾಸ್, ಕೆ.ಎಸ್.ಆನಂದ್, ನಯನಾ ಮೋಟಮ್ಮ, ಟಿ.ಡಿ.ರಾಜೇಗೌಡ, ಮೀನಾ ನಾಗರಾಜ್ ಇತರರಿದ್ದರು.
Published on

ಚಿಕ್ಕಮಗಳೂರು: ಕಡೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಗ್ರಾಪಂಗಳ ತಪ್ಪು ಮಾಹಿತಿ ನೀಡಿರುವ ಕುಡಿಯುವ ನೀರು ಸರಬರಾಜು ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜಿಪಂ ಸಿಇಒ ಡಾ. ಬಿ.ಗೋಪಾಲಕೃಷ್ಣ ಅವರಿಗೆ ಸೂಚನೆ ನೀಡಿದರು.
ಜಿಪಂನಲ್ಲಿ ಬುಧವಾರ ಬರ ನಿರ್ವಹಣೆ, ಡೆಂೆ ಇತರ ವಿಷಯಗಳ ಕುರಿತ ಅಧಿಕಾರಿಗಳ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿನ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯಲಾರಂಭಿಸಿದರು. ಈ ವೇಳೆ ಕಡೂರು ಶಾಸಕ ಆನಂದ್ ಅವರು ಜಿಲ್ಲೆಯಲ್ಲೇ ಕಡೂರು ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದು ಅಂಕಿ ಅಂಶಗಳ ಸಹಿತ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಬರ ನಿರ್ವಹಣೆ ಹಾಗೂ ಮುಂದಿನ ದಿನಗಳಲ್ಲಿ ಮಳೆಯಿಂದ ಯಾವುದಾದರೂ ಹಾನಿ ಸಂಭವಿಸಿದರೆ ಕೂಡಲೇ ಸ್ಪಂದಿಸಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡುತ್ತಿದ್ದಂತೆ ಶಾಸಕ ಕೆ.ಎಸ್.ಆನಂದ್ ಅವರು ಆಕ್ಷೇಪ ವ್ಯಕ್ತಪಡಿಸಿದರು. ವರದಿಯಲ್ಲಿ ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಕುಡಿಯುವ ನೀರಿನ ಸಮಸ್ಯೆ ಎಂದು ದಾಖಲಾಗಿದೆ. ಆದರೆ ಕಾಮನಕೆರೆ, ಅಣ್ಣಗೆರೆ ಸೇರಿದಂತೆ ಹಲವು ಪಂಚಾಯಿತಿಗಳಲ್ಲಿ ಸಮಸ್ಯೆ ಇದೆ. ಇದನ್ನು ಡಿಸಿ ಹಾಗೂ ಜಿಪಂ ಸಿಇಒ ಖುದ್ದಾಗಿ ನೋಡಿದ್ದಾರೆ ಎಂದು ಹೇಳಿದರು.
ಆದರೆ ಈ ಕುರಿತು ಮಾಹಿತಿ ನೀಡಲು ಸಭೆಯಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರು ಇರಲಿಲ್ಲ. ಅವರ ಬದಲಿಗೆ ಅದೇ ಇಲಾಖೆಯ ಬೇರೊಬ್ಬ ಅಧಿಕಾರಿಯನ್ನು ಸಭೆಗೆ ಕಳುಹಿಸಲಾಗಿತ್ತು. ಅವರಿಂದ ಸ್ಪಷ್ಟವಾದ ಉತ್ತರ ಸಿಗಲಿಲ್ಲ. ಇದೇ ವಿಷಯವಾಗಿ ಕಡೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಲ್ಲಲ್ಲಿ ನೀರಿನ ಸಮಸ್ಯೆ ಇದೆ ಎಂಬ ಮಾಹಿತಿ ನೀಡುತ್ತಿದ್ದಂತೆ, ತಪ್ಪು ಮಾಹಿತಿ ನೀಡಿರುವ ಎಇಇ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಬೇಕೆಂದು ಸಚಿವರು ಜಿಪಂ ಸಿಇಒ ಅವರಿಗೆ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net