

ಬೆಂಗಳೂರು: ರೈತರು-ಭೂ ಮಾಲೀಕರಿಂದ ಸಾರ್ವಜನಿಕ ಉದ್ದೇಶಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ನೀಡುವ ಪರಿಹಾರಕ್ಕೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡುವ ವಿಚಾರವನ್ನು ತ್ವರಿತಗತಿಯಲ್ಲಿ ಬಗೆಹರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಏಕಸದಸ್ಯ ಪೀಠ 2023ರ ಏ.12ರಂದು ಭೂಮಿ ಕಳೆದುಕೊಂಡವರ ಪರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಆಯುಕ್ತರು (ಟಿಡಿಎಸ್) ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ಹಿರಿಯ ನ್ಯಾಯಮೂರ್ತಿ ಎಸ್. ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಎ.ವಿಜಯಕುಮಾರ್ ಪಾಟೀಲ್ ಅವರಿದ್ದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
2013ರ ಭೂ ಸ್ವಾಧೀನ ಕಾಯ್ದೆ ಹೊರತಾಗಿ ಇತರ ಕಾನೂನುಗಳಡಿ ಅನೇಕ ರೈತರು ಪಡೆಯುವ ಪರಿಹಾರಕ್ಕೆ ಆದಾಯ ತೆರಿಗೆ ಪಾವತಿಸುವ ಕುರಿತು ಅಸಮಾಧಾನಗೊಂಡಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಅಂಶವನ್ನು ಪರಿಹರಿಸಲು ತಕ್ಷಣ ಕ್ರಮ ತೆಗೆದುಕೊಳ್ಳಬೇಕು. 2013ರ ಕಾಯ್ದೆಯ ಸೆಕ್ಷನ್ 96 ಎಲ್ಲ ಭೂಮಿ ಕಳೆದುಕೊಳ್ಳುವವರಿಗೆ ಅನ್ವಯಿಸಬೇಕು ಎಂದು ಆದೇಶಿಸಿದೆ.
ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ ಸ್ಥಾಪನೆ ಕಾಯ್ದೆ-2013ರಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಸೆಕ್ಷನ್ 96ರಡಿ ಪರಿಹಾರ ಪಾವತಿಸಲು ಐಟಿ ವಿನಾಯಿತಿ ನೀಡಲಾಗುತ್ತದೆ. ಆದರೆ ಅದಕ್ಕೂ ಮುಂಚೆಯೇ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಯ್ದೆ 1966, ಕರ್ನಾಟಕ ಹೆದ್ದಾರಿಗಳ ಕಾಯ್ದೆ 1964, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ 1987 ಇತ್ಯಾದಿಗಳಂತಹ ಸ್ಥಳೀಯ ಅಥವಾ ರಾಜ್ಯ ಕಾನೂನುಗಳು ಜಾರಿಗೆ ಬಂದಿವೆ.
ಹಾಗಾಗಿ ಅವುಗಳಡಿ ಪರಿಹಾರ ಪಡೆಯುವ ರೈತರಿಗೂ ಆದಾಯ ತೆರಿಗೆ ವಿನಾಯ್ತಿ ನೀಡಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ಸೆಕ್ಷನ್ 96ರ ನಿಬಂಧನೆಗಳು ತಾರತಮ್ಯದಿಂದ ಕೂಡಿವೆ ಎಂದಿದೆ. ಹಾಗಾಗಿ ಆ ತೀರ್ಪು ಪ್ರಶ್ನಿಸಿ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು.