

ಲೈಸಾ ನಾಡ್ ಲಾಬೆಮ್: ಆಶ್ಚರ್ಯಕರ ರೀತಿಯಲ್ಲಿ ವ್ಯಕ್ತಿಯೊಬ್ಬರು ಹೆಲಿಕಾಪ್ಟರ್‌ನಿಂದ ಭಾರೀ ಮೊತ್ತದ ನೋಟುಗಳನ್ನು ಮೇಲಿನಿಂದ ಮಳೆಯಂತೆ ಸುರಿಸಿದ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ಇದೀಗ ಹಲವರ ಕೆಂಗಣ್ಣಿಗೆ ಕೂಡ ಗುರಿಯಾಗಿದೆ.
ಕಾಮಿಲ್ ಬಾರ್ತೊಶೆಕ್, ಜೆಕ್ ಗಣರಾಜ್ಯದಿಂದ ಬಂದ ಪ್ರಸಿದ್ಧ ಪ್ರಭಾವಿ ಮತ್ತು ದೂರದರ್ಶನ ನಿರೂಪಕ ಎಂದು ಹೇಳಲಾದ ಕಾಜ್ಮಾ ಎಂಬ ಹೆಸರಿನ ವ್ಯಕ್ತಿ ವಿಭಿನ್ನ ಪ್ರಯತ್ನ ಮಾಡುವಂತೆ ಹೆಲಿಕಾಪ್ಟರ್‌ನಿಂದ ಒಂದು ಮಿಲಿಯನ್ ಡಾಲರ್‌ಗೂ ಹೆಚ್ಚಿನ ನೋಟುಗಳನ್ನು ಸುರಿಸಿದ್ದಾರೆ. ಇದನ್ನು ಸಂಗ್ರಹಿಸಲು ಜನರು ನಾ ಮುಂದು ತಾ ಮುಂದು ಎಂದು ಕೈಚೀಲಗಳನ್ನು ಹಿಡಿದು ಮುಗ್ಗಿಬಿದ್ದಿದ್ದಾರೆ.
ಇದೊಂದು ಈವೆಂಟ್ ಎಂದು ಹೇಳಲಾಗಿದ್ದು, ಆರಂಭದಲ್ಲಿ ಈ ಬೃಹತ್ ಮೊತ್ತವನ್ನು ಒಬ್ಬ ಅದೃಷ್ಟಶಾಲಿ ವಿಜೇತರಿಗೆ ಸ್ಪರ್ಧೆಯ ಮೂಲಕ ನೀಡಲು ಉದ್ದೇಶಿಸಲಾಗಿತ್ತು. ಭಾಗವಹಿಸುವವರಿಗೆ ಕಜ್ಮಾ ಅವರ ಸಿನಿಮಾ 'ಒನ್ ಮ್ಯಾನ್ ಶೋ; ದಿ ಮೂವಿ'ಯಲ್ಲಿ ಅಡಗಿರುವ ಸಂದೇಶವನ್ನು ಡಿಕೋಡ್ ಮಾಡಲು ಸವಾಲು ಹಾಕಲಾಗಿತ್ತು. ಆದಾಗ್ಯೂ, ಈ ಒಗಟು ಸ್ಪರ್ಧಿಗಳಿಗೆ ಭೇದಿಸಲು ತುಂಬಾ ಅಸಾಧಾರಣವಾಯಿತು ಎಂಬುದು ಕಡೆಯಲ್ಲಿ ತಿಳಿದಿದೆ.
ಈ ಸವಾಲನ್ನು ಎದುರಿಸಲು ಭಾಗವಹಿಸಿದ ಅಷ್ಟೂ ನೋಂದಾಯಿತ ಸ್ಪರ್ಧಿಗಳಿಗೆ ಘೋಷಿಸಿದ್ದ ಹಣವನ್ನು ವಿತರಿಸಲು ಕಜ್ಮಾ ನಿರ್ಧರಿಸಿ, ಹಣದ ಬಿಡುಗಡೆಗೆ ನಿಖರವಾದ ಸ್ಥಳದ ಬಗ್ಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದರು.
ಅದರಂತೆ ಅವರು ಹೆಲಿಕಾಪ್ಟರ್ ಬಳಸಿ, ತಿಳಿಸಿದ್ದ ಸ್ಥಳದಲ್ಲಿ ನೋಟುಗಳನ್ನು ಹರಿಸಿದ್ದಾರೆ. ಹಣವನ್ನು ಆಯ್ದುಕೊಳ್ಳಲು ಜನರು ತಮ್ಮ ಕೈಯಲಿದ್ದ ಬ್ಯಾಗು ಸೇರಿದಂತೆ ಇತರೆ ವಸ್ತುಗಳನ್ನು ಬಳಸಿಕೊಂಡಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೆಯಾಗಿದೆ,(ಏಜೆನ್ಸೀಸ್).