ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತವನ್ನು ವಿಪಕ್ಷಗಳು ದೊಡ್ಡದಾಗಿ ಬಿಂಬಿಸುತ್ತಿವೆ: Hema Malini ಕಿಡಿ

Hema Malini
Published on

ನವದೆಹಲಿ: ಜನವರಿ 29ರ ಮೌನಿ ಅಮಾವಾಸ್ಯೆಯಂದು ಮಹಾಕುಂಭಮೇಳದಲ್ಲಿ ಸಂಭವಿಸಿದ್ದ ಭೀಕರ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಭಕ್ತರು ಸೇರಿದಂತೆ 30 ಮಂದಿ ಮೃತಪಟ್ಟಿದ್ದರು. ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಸರ್ಕಾರವು ನ್ಯಾಯಾಂಗ ತನಿಖೆಗೆ ಆದೇಶಿಸಿದ್ದು, ಈ ಬಗ್ಗೆಗಿನ ಪರ-ವಿರೋಧದ ಚರ್ಚೆ ನಡೆಯುತ್ತಿರುವ ನಡುವೆಯೇ ಬಿಜೆಪಿ ಸಂಸದೆ ಹೇಮಾ ಮಾಲಿನಿ (Hema Malini) ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಈ ಕುರಿತಾಗಿ ಮಾತನಾಡಿರುವ ಸಂಸದೆ ಹೇಮಾ ಮಾಲಿನಿ (Hema Malini), ನಾವು ಕೂಡ ಕುಂಭಮೇಳಕ್ಕೆ ಹೋಗಿ ಪವಿತ್ರಾಸ್ನಾನ ಮಾಡಿ ಬಂದಿದ್ದೇವೆ. ಉತ್ತರಪ್ರದೇಶ ಸರ್ಕಾರ ಎಲ್ಲವನ್ನು ಚೆನ್ನಾಗಿ ನಿರ್ವಹಿಸಿದೆ. ಕಾಲ್ತುಳಿತ ನಡೆದಿರುವುದು ನಿಜ. ಆದರೆ ದೊಡ್ಡ ಘಟನೆಯಲ್ಲ. ವಿಪಕ್ಷಗಳು ಅದನ್ನು ದೊಡ್ಡದಾಗಿ ಬಿಂಬಿಸುತ್ತಿವೆ.

ಕುಂಭಮೇಳವನ್ನು ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರುತ್ತಿದ್ದಾರೆ. ನಿರ್ವಹಣೆಯು ಕಷ್ಟಕರವಾದರೂ ನಮ್ಮಿಂದ ಸಾಧ್ಯವಾದಷ್ಟು ಮಾಡಲಾಗುತ್ತಿದೆ. ಇದು ಅವರ (ವಿಪಕ್ಷಗಳ) ಕೆಲಸ. ಅವರಿಗೆ ತೋಚಿದ್ದನ್ನು ಹೇಳುತ್ತಲೇ ಇರುತ್ತಾರೆ ಎಂದು ನಟಿ, ಸಂಸದೆ ಹೇಮಾ ಮಾಲಿನಿ ಕಿಡಿಕಾರಿದ್ದಾರೆ.

ಇನ್ನೂ ನಟಿ, ಸಂಸದೆ ಹೇಮಾ ಮಾಲಿನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಸಂಸದ ತಾರಿಕ್​​ ಅನ್ವರ್, ಕಾಲ್ತುಳಿತದ ಬಗ್ಗೆ ಹೇಳಿಕೆ ನೀಡಿರುವ ಸಂಸದೆ ಹೇಮಾ ಮಾಲಿನಿ ಅವರಿಗೆ ಅಲ್ಲಿ ಏನು ನಡೆದಿದೆ ಎಂದು ನಿಜವಾಗಿಯೂ ತಿಳಿದಿಲ್ಲ. ಕುಂಭಮೇಳ ಶುರುವಾದಾಗಿನಿಂದಲೂ ಸರ್ಕಾರ ಅದರ ನಿರ್ವಹಣೆಯಲ್ಲಿ ವಿಫಲವಾಗಿದೆ. ಪೊಲೀಸರು ವಿಐಪಿಗಳಿಗೆ ಭದ್ರತೆ ನೀಡುವಲ್ಲಿ ಬ್ಯುಸಿಯಾಗಿದ್ದರು. ಸಾಮಾನ್ಯಜನರ ಬಗ್ಗೆ ಯಾವುದೇ ಕಾಳಜಿಯನ್ನು ಹೊಂದಿಲ್ಲ ಎಂದು ಕಾಂಗ್ರೆಸ್ ಸಂಸದ ತಾರಿಕ್ ಅನ್ವರ್ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net