

ದೆಹಲಿ: 500 ರೂಪಾಯಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವ ಅಥವಾ 1000 ರೂಪಾಯಿ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೊಂದಿಲ್ಲ ಎಂದು ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
2000 ರೂ. ನೋಟುಗಳನ್ನು ಚಲಾವಣೆಯಿಂದ ಹಿಂಪಡೆದಿರುವ ಹಿನ್ನೆಲೆಯಲ್ಲಿ ಆರ್‌ಬಿಐ ಗವರ್ನರ್ ಈ ವಿಷಯದ ಕುರಿತಾಗಿ ಸ್ಪಷ್ಟನೆ ನೀಡಿದ್ದು, ಆರ್‌ಬಿಐ 500 ರೂ. ನೋಟು ಹಿಂತೆಗೆದುಕೊಳ್ಳುವ ಅಥವಾ 1,000 ರೂ. ನೋಟು ಮರು ಪರಿಚಯಿಸುವ ಬಗ್ಗೆ ಯೋಚಿಸುತ್ತಿಲ್ಲ. ಸಾರ್ವಜನಿಕರು ಈ ಕುರಿತು ಊಹಾಪೋಹ ಎಬ್ಬಿಸಬಾರದು ಎಂದು ಹೇಳಿದರು.
ಚಲಾವಣೆಯಲ್ಲಿದ್ದ 2000ರೂ. ನೋಟುಗಳ ಪೈಕಿ ಶೇ.50ರಷ್ಟು ನೋಟುಗಳು ವಾಪಸ್ ಬಂದಿವೆ. ಇವುಗಳ ಮೌಲ್ಯ 1.82 ಲಕ್ಷ ಕೋಟಿ ರೂ. ಆಗಿದೆ. ವಾಪಸಾದ 2000 ರೂ.ನೋಟುಗಳು ಕೆಲವರು ಬ್ಯಾಂಕ್ ಠೇವಣಿ ರೂಪದಲ್ಲಿ ಬ್ಯಾಂಕ್ಗೆ ಹಿಂತಿರುಗಿಸಿದ್ದರೆ, ಉಳಿದವರು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕೊನೆಯ ಕ್ಷಣದಲ್ಲಿ ಜನರು ನೋಟುಗಳ ಜಮಾ ಮಾಡಲು ಓಡಾಡಬಾರದು. ಈಗಲೇ ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ 2,000 ರೂ. ನೋಟುಗಳನ್ನು ಠೇವಣಿ ಮಾಡಲು ಅಥವಾ ಬದಲಾಯಿಸಲು ಬ್ಯಾಂಕ್ಗೆ ಹೋಗಬೇಕು. ಕೊನೆಯ 10-15 ದಿನಗಳಲ್ಲಿ ದಯವಿಟ್ಟು ಆತುರಪಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.(ಏಜೆನ್ಸೀಸ್)