ಆನೆ ಸೊಂಡಿಲು ಅಂತ ಕನ್ಫ್ಯೂಸ್​ ಆಗ್ಬೇಡಿ ಇದೊಂದು ಹಾವು! ಇದರ ಬಗ್ಗೆ ತಿಳಿದ್ರೆ ನಿಮ್ಮ ಹುಬ್ಬೇರುತ್ತೆ | Elephant trunk snake

Elephant trunk snake
Published on

ನವದೆಹಲಿ: ಈ ಭೂಮಂಡಲದಲ್ಲಿ ಅನೇಕ ಬಗೆಯ ಹಾವು ( Snake ) ಗಳು ನೆಲೆಸಿವೆ. ಭಾರಿ ಗಾತ್ರದ ಹಾವಿನಿಂದ ಹಿಡಿದು ಸಣ್ಣ ಹಾವಿನವರೆಗೂ ಹಾಗೂ ವಿಷಪೂರಿತ ಮತ್ತು ವಿಷರಹಿತ ಹಾವುಗಳೂ ನಮ್ಮ ನಡುವೆ ಜೀವಿಸುತ್ತಿವೆ. ತಮ್ಮ ನೋಟ ಮತ್ತು ಗುಣಗಳಿಂದಲೇ ಕೆಲವು ಹಾವುಗಳು ಸಾಕಷ್ಟು ಪ್ರಸಿದ್ಧಿ ಪಡೆದಿವೆ. ಅವುಗಳಲ್ಲಿ ಆಕ್ರೊಕಾರ್ಡಸ್ ಜವಾನಿಕಸ್ ಕೂಡ ಒಂದು. ಇದನ್ನು ಆನೆ ಸೊಂಡಿಲು ಹಾವು ( Elephant trunk snake ) ಎಂದು ಕರೆಯುತ್ತಾರೆ.

ಅಕ್ರೊಕಾರ್ಡಿಡೆ ಕುಟುಂಬಕ್ಕೆ ಸೇರಿದ ಹಾವಿನ ಜಾತಿಯಾಗಿದ್ದು, ನೋಡಲು ಥೇಟ್​ ಆನೆ ಸೊಂಡಿಲಿನಂತೆ ಕಾಣುತ್ತದೆ. ಹೀಗಾಗಿ ಇದಕ್ಕೆ ಆನೆ ಸೊಂಡಿಲು ಹಾವು ಎಂಬ ಹೆಸರು ಬಂದಿದೆ. ಇದೊಂದು ವಿಷರಹಿತ ಹಾವಾಗಿದೆ.

ಈ ಆನೆಯ ಸೊಂಡಿಲು ಹಾವು ಅಗಲವಾದ ಮತ್ತು ಚಪ್ಪಟೆಯಾದ ತಲೆಯನ್ನು ಹೊಂದಿರುತ್ತದೆ. ಇದರ ಮೂಗಿನ ಹೊಳ್ಳೆಗಳು ಮೂಗಿನ ಮೇಲ್ಭಾಗದಲ್ಲಿವೆ ಮತ್ತು ಇದರ ತಲೆಯು ದೇಹದಷ್ಟೇ ಅಗಲವಾಗಿರುತ್ತದೆ. ಹೆಣ್ಣು ಹಾವು ಗಂಡು ಹಾವುಗಳಿಗಿಂತಲೂ ದೊಡ್ಡದಾಗಿರುತ್ತವೆ. ಈ ಹಾವುಗಳು ಸುಮಾರು 2.4 ಮೀಟರ್ ಉದ್ದ ಇರುತ್ತವೆ. ಹಾವಿನ ಬಣ್ಣ ಕಂದು ಮತ್ತು ಒಳಭಾಗವು ತಿಳಿ ಹಳದಿ ಬಣ್ಣದ್ದಾಗಿದೆ.

ಆನೆ ಸೊಂಡಿಲು ಹಾವು ನೀರಿನ ಅಡಿಯಲ್ಲಿ ಮಲಗಲು ಇಷ್ಟಪಡುವ ಹಾವು. ದೇಹವು ನೀರಿನಿಂದ ಹೊರಗಿದ್ದರೆ ಅದರ ಭಾರವನ್ನು ಹೊರಲು ಸಾಧ್ಯವಿಲ್ಲ. ಅಲ್ಲದೆ, ನೀರನ್ನು ಬಿಟ್ಟುಬಂದರೆ ಗಂಭೀರ ಗಾಯಕ್ಕೆ ತುತ್ತಾಗಬಹುದು. ಇನ್ನು ಈ ಹಾವುಗಳು ಒರಟು ಚರ್ಮವನ್ನು ಹೊಂದಿದ್ದು, ಚರ್ಮದ ಉದ್ಯಮಕ್ಕಾಗಿ ಇವುಗಳನ್ನು ಬೇಟೆಯಾಡಲಾಗುತ್ತದೆ. ಹೀಗಾಗಿ ಇದು ಕೂಡ ಅಳಿವಿನಂಚಿನಲ್ಲಿರುವ ಜೀವಿಯಾಗಿದೆ.

ಈ ಆನೆ ಸೊಂಡಿಲು ಹಾವು ಆಗ್ನೇಯ ಏಷ್ಯಾದಲ್ಲಿ ಕಂಡುಬರುತ್ತದೆ. ಅಲ್ಲದೆ, ದಕ್ಷಿಣ ಥೈಲ್ಯಾಂಡ್, ಪೆನಿನ್ಸುಲರ್, ಮಲೇಷ್ಯಾದ ಪಶ್ಚಿಮ ಕರಾವಳಿ, ಸಿಂಗಾಪುರ, ಬೊರ್ನಿಯೊ ಮತ್ತು ಇಂಡೋನೇಷಿಯನ್ ದ್ವೀಪಗಳಲ್ಲಿ ಕಂಡುಬರುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net