

ನವದೆಹಲಿ: ಕೋವಿಡ್ 19 ಇರುವ ಕಾರಣ ಕೆಲವು ಪರೀಕ್ಷಾರ್ಥಿಗಳು ಸಿಎ ಪರೀಕ್ಷೆಯನ್ನು ಆನ್ಲೈನ್ ಮೂಲಕ ನಡೆಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ನ್ಯಾಯಪೀಠದ ಅಪೇಕ್ಷೆಯಂತೆ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಬುಧವಾರ ಪ್ರತಿಕ್ರಿಯಿಸಿದ್ದು, ಆನ್ಲೈನ್ ಮೂಲಕ ಸಿಎ ಪರೀಕ್ಷೆ ನಡೆಸುವುದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಮೂರು ಗಂಟೆ ಅವಧಿಯ ಪರೀಕ್ಷೆಯಲ್ಲಿ ವಿವಿಧ ನಮೂನೆಯ ಪ್ರಶ್ನೆಗಳಿದ್ದು, ಅದಕ್ಕೆ ವಿವರಣಾತ್ಮಕ ಉತ್ತರವೂ ಬೇಕಾಗುತ್ತದೆ. ಟಿಕ್ ಮಾರ್ಕ್ ಹಾಕುವ ಅಥವಾ ಒಂದು ಶಬ್ದದಲ್ಲಿ ಉತ್ತರಿಸುವ ಪ್ರಶ್ನೆಗಳಲ್ಲ. ಹೀಗಾಗಿ ಆನ್ಲೈನ್ ಪರೀಕ್ಷೆ ನಡೆಸಲಾಗದು ಎಂದು ಐಸಿಎಐ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್, ದಿನೇಶ್ ಮಹೇಶ್ವರಿ, ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿದ್ದು, ಪರೀಕ್ಷಾ ಸಂದರ್ಭದಲ್ಲಿ ಕೋವಿಡ್ 19 ತಡೆಗೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನೇನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬ ವಿವರವನ್ನು ವೆಬ್ಸೈಟ್ನಲ್ಲಿ ಪ್ರಕಟಿಸುವಂತೆ ಸೂಚಿಸಿದೆ.
ಸಿಎ ಪರೀಕ್ಷೆ ನವೆಂಬರ್ 21ರಿಂದ ಡಿಸೆಂಬರ್ 14ರ ತನಕ ನಿಗದಿಯಾಗಿದ್ದು, ಅದರಲ್ಲಿ ಯಾವುದೇ ಬದಲಾವಣೆ ಇರಲ್ಲ ಎಂಬುದನ್ನೂ ಐಸಿಎಐ ಸ್ಪಷ್ಟಪಡಿಸಿದೆ. (ಏಜೆನ್ಸೀಸ್)