

ಶಿವ ಸ್ಥಾವರಮಠ
ಚಿತ್ರ: ನಾಟ್ ಔಟ್
ನಿರ್ದೇಶನ: ಎಂ. ಅಂಬರೀಷ್
ತಾರಾಗಣ: ರವಿಶಂಕರ್, ಅಜಯ್ ಪೃಥ್ವಿ, ರಚನಾ ಇಂದರ್, ಕಾಕ್ರೋಚ್ ಸುಧಿ, ಸಲ್ಮಾನ್ ಮುಂತಾದವರು.
ರೇಟಿಂಗ್: 3
ಪಡೆದುಕೊಂಡ ಸಾಲಕ್ಕಾಗಿ ಅನುಭವಿಸಿದ ಕಿರಿಕಿರಿಗೆ ತಕ್ಕ ಉತ್ತರ ನೀಡಲೇಬೇಕು ಎನ್ನುವುದು ಅಜಯ್ (ಅಜಯ್ ಪೃಥ್ವಿ) ಹಠ. ವಂಚಿಸಿದವನಿಗೆ ಗತಿ ಕಾಣಿಸಿ ಪಿತ್ರಾರ್ಜಿತ ಆಸ್ತಿಯನ್ನು ವಶಕ್ಕೆ ಪಡೆಯಬೇಕು ಎಂಬುದು ಶ್ರೀಧರ್ (ಗೋಪಾಲ್‌ಕೃಷ್ಣ ದೇಶಪಾಂಡೆ) ಹಠ. ಈ ಇಬ್ಬರ ಮಧ್ಯೆ, ಕರ್ತವ್ಯಕ್ಕೆ ಅಡ್ಡಿಪಡಿಸಿ ದರ್ಪ ಮೆರೆದವನಿಗೆ ತಕ್ಕ ಪಾಠ ಕಲಿಸಲೇಬೇಕು ಎನ್ನುವಾತ ಒಬ್ಬ (ಅಶ್ವಿನ್ ಹಾಸನ್). ಈ ಮೂವರ ಗುರಿ ಒಬ್ಬರೇ ಒಂಟಿಕೊಪ್ಪಲ್ ದೇವರಾಜ್ (ರವಿಶಂಕರ್). ಕೊನೆಗೆ ಆತನ ವಿರುದ್ಧ ಸೇಡು ತೀರಿಸಿಕೊಂಡು ಆತನನ್ನೇ ಔಟ್ ಮಾಡುತ್ತಾರಾ? ಅಥವಾ ಹಾಗೆಯೇ ಉಳಿಸುತ್ತಾರಾ ಎಂಬುದೇ ‘ನಾಟ್ ಔಟ್’ ಕಥಾಹಂದರ.
ಡಾರ್ಕ್ ಹ್ಯೂಮರ್ ಜಾನರ್‌ನ ಕಥೆಯನ್ನು ನಿರ್ದೇಶಕ ಅಂಬರೀಶ್ ಎಲ್ಲಿಯೂ ಲೆಂಥಿ ಎನಿಸದೆ, ಬೋರ್ ಹೊಡೆಸದೇ ಅಚ್ಚುಕಟ್ಟಾಗಿ ದೃಶ್ಯಗಳನ್ನು ಜೋಡಿಸಿ ಕಥೆಯನ್ನು ನೇರವಾಗಿ ಹೇಳಿದ್ದಾರೆ. ದೃಶ್ಯದಿಂದ ದೃಶ್ಯಕ್ಕೆ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಹಾಸ್ಯ, ಗಮನಸೆಳೆಯುವ ಪಾತ್ರಗಳು, ಎಮೋಷನ್, ಸೀಟಿನ ತುದಿಗೆ ಬರುವಂತೆ ಮಾಡುವ ಕುತೂಹಲ ಹಿಡಿದಿಟ್ಟುಕೊಳ್ಳಲಾಗಿದೆ. ಆ ಮೂಲಕ ಎರಡು ತಾಸು ಪ್ರೇಕ್ಷಕರನ್ನು ರಂಜಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಕಥೆಯ ಸಾರ ವಿಶೇಷವಾಗಿದ್ದು, ಒಂದೇ ಹಾದಿಯಲ್ಲಿ ಸಾಗುತ್ತದೆ. ಮೊದಲರ್ಧದಲ್ಲಿ ಕಥೆ ಬಿಟ್ಟುಕೊಟ್ಟರು ಎನಿಸುತ್ತದೆ. ಆದರೆ, ದ್ವಿತೀಯಾರ್ಧದಲ್ಲಿ ಪಡೆದುಕೊಳ್ಳುವ ತಿರುವು ಕಥೆಗೆ ಟ್ವಿಸ್ಟ್ ನೀಡುತ್ತದೆ. ಈ ಕಾರಣಕ್ಕಾಗಿಯೇ ನಿರ್ದೇಶಕರು ‘ಫಸ್ಟ್ ಹ್ಾ ಫ್ರೀ, ಸೆಕೆಂಡ್ ಹ್ಾ ಟಿಕೆಟ್’ ಎಂಬ ವಿನೂತನ ಪ್ರಯತ್ನ ಮಾಡಿರುವುದು.
ದೇವರಾಜ್ ಪಾತ್ರದಲ್ಲಿ ಖದರ್ ತೋರಿಸಿರುವ ರವಿಶಂಕರ್ ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ಕೊನೆಗೆ ಸಂದೇಶ ನೀಡುವುದೂ ಇವರ ಪಾತ್ರವೇ. ನಾಯಕ ಅಜಯ್ ಪೃಥ್ವಿ ಮುಗ್ಧ ಅಭಿನಯ ಮನೋಜ್ಞವಾಗಿದೆ. ನಾಯಕಿ ರಚನಾ ಇಂದರ್ ಕ್ಯೂಟ್‌ನೆಸ್ ಅನ್ನು ಕಥೆಗೆ ಒಗ್ಗುವಂತೆ ಬಳಸಿಕೊಳ್ಳಲಾಗಿದೆ. ನಾಯಕ ಆಂಬುಲೆನ್ಸ್ ಡ್ರೈವರ್ ಹಾಗೂ ನಾಯಕಿ ನರ್ಸ್ ಪಾತ್ರದ ಮೂಲಕ ಕರೊನಾ ವಾರಿಯರ್ಸ್‌ಗೆ ಸಿನಿಮಾ ಅರ್ಪಿಸಿರುವುದು ಗಮನಾರ್ಹ. ಕಾಕ್ರೋಜ್ ಸುಧಿ (ಸ್ನೇಕ್ ಸೀನ), ಸಲ್ಮಾನ್ (ಕೊಕ್ಕರೆ), ಪ್ರಶಾಂತ್ ಸಿದ್ಧಿ (ಕಾಳು) ಪಾತ್ರಗಳು ಗಮನಸೆಳೆಯುತ್ತವೆ. ದುಡ್ಡು, ಅಧಿಕಾರ, ದರ್ಪಗಳು ‘ಔಟ್’ ಆಗುತ್ತವೆ. ಆದರೆ, ಮನುಷ್ಯನಾಗಿ ಬದುಕುವುದೇ ಒಳ್ಳೆಯವರ ಲಕ್ಷಣ ಎಂದಿಗೂ ‘ನಾಟ್ ಔಟ್’ ಎಂಬ ಸಂದೇಶವನ್ನು ಸಿನಿಮಾ ನೀಡುತ್ತದೆ.