

1. ವಾತಜ ಕಾಸ: ಹೃದಯ, ತಲೆ, ಉದರ ಹಾಗೂ ಪಕ್ಕೆಗಳಲ್ಲಿ ವೇದನೆ, ಬಾಯಿ ಒಣಗುವುದು, ಬಲ, ಸ್ವರ, ಓಜಸ್ಸು ಕ್ಷೀಣವಾಗುವುದು, ಒಡಕು ಧ್ವನಿ, ಭಿನ್ನ ಧ್ವನಿ ಹಾಗೂ ಒಣಕೆಮ್ಮುಗಳು ಮುಖ್ಯ ಲಕ್ಷಣಗಳು. ನಿಯಂತ್ರಣಕ್ಕೆ ಘೃತ, ಪೇಯ, ಯೂಷಗಳೆಂಬ ದ್ರವಾಹಾರಗಳು, ಗೋವಿನ ಹಾಲು, ಒಣಗಿಸಿ ಹುರಿದ ಕಪ್ಪು ಕಡಲೆಕಾಳು, ಮಾಂಸಾಹಾರಿಗಳಿಗೆ ಮಾಂಸರಸಗಳು ಉಪಯುಕ್ತವಾಗಿವೆ. ತೈಲ ಅಭ್ಯಂಗ, ವಮನ, ವಿರೇಚನಗಳನ್ನು ತೀವ್ರವಾಗಿದ್ದಾಗ ನೀಡಬಹುದಾಗಿದೆ.
2. ಪಿತ್ತಜ ಕಾಸ: ಎದೆಉರಿ, ಜ್ವರ, ಬಾಯಿ ಒಣಗಿ ಕಹಿಯಾಗುವುದು, ಬಾಯಾರಿಕೆ, ಹಳದಿಕಫ ಖಾರವಾಗಿ ಹೊರಬರುವುದು, ಮೈಉರಿ, ರಕ್ತಹೀನತೆಗಳು ಇದರ ಲಕ್ಷಣ. ಮದನಫಲ, ಯಷ್ಟಿಮಧು, ಮಧುರ ದ್ರವ್ಯ ಬಳಸಿ ವಮನ ಕರ್ಮ, ತಿಗಡೆಬೇರು, ಕಹಿ ದ್ರವ್ಯದಿಂದ ವಿರೇಚನ, ಬಾರ್ಲಿಯಿಂದ ಮಾಡಿದ ಪೇಯ, ಶೀತಲ, ಸ್ನಿಗ್ಧ ದ್ರವ್ಯಗಳೊಂದಿಗೆ ಪಥ್ಯಾಹಾರ ಇದಕ್ಕೆ ಪ್ರಶಸ್ತವಾಗಿದೆ.
3. ಕಫಜ ಕಾಸ: ಕಫ ಲೇಪನ, ಮೈಕೈ ನೋವು, ತಲೆನೋವು, ದೇಹವು ಕಫದಿಂದ ತುಂಬಿದ ಅನುಭವ, ಬಾಯಿರುಚಿ ಹಾಗೂ ಹಸಿವು ಇಲ್ಲದಿರುವುದು, ಮೈತುರಿಕೆ, ದಪ್ಪಗಿನ ಕಫ ಕೆಮ್ಮಿನೊಂದಿಗೆ ಹೊರಬರುವುದು. ಇದಕ್ಕೆ ವಮನಕರ್ಮ ಸೂಕ್ತವಾಗಿದ್ದು ಹಾಲಿನೊಂದಿಗೆ ಹಿಪ್ಪಲಿ, ಹುರುಳಿ ಕಟ್ಟು, ಮೂಲಂಗಿ ಕಟ್ಟು, ನುಗ್ಗೆಕಾಯಿ, ಪಡುವಲಕಾಯಿಯ ವ್ಯಂಜನಗಳು, ಎಳ್ಳು, ಸಾಸಿವೆ, ಶುಂಠಿ, ಪಡುವಲ, ಬಿಲ್ವಗಳು ಅತ್ಯುಪಯುಕ್ತ.
4. ಕ್ಷತಜ ಕಾಸ: ಶ್ವಾಸಕೋಶ ಅಥವಾ ಎದೆಭಾಗಕ್ಕೆ ಆಗುವ ಗಾಯದಿಂದ ಶ್ವಾಸಕೋಶದಲ್ಲಿ ಗಾಳಿ, ನೀರು, ರಕ್ತ ಅಥವಾ ಕೀವು ತುಂಬಿಕೊಂಡು ಕೆಮ್ಮು ಕಾಣಿಸಿಕೊಳ್ಳುತ್ತದೆ. ಎದೆಯಲ್ಲಾಗುವ ಗಾಯಗಳಿಂದ, ಅಘಾತಗಳಿಂದ, ಅತಿಯಾದ ಶ್ರಮದಿಂದ, ಸಂಘರ್ಷಗಳಿಂದಲೂ ಉಂಟಾಗುತ್ತದೆ. ಆರಂಭದಲ್ಲಿ ಒಣಕೆಮ್ಮು ಇದ್ದು ಬಳಿಕ ಎದೆ, ಸಂಧಿನೋವು, ಜ್ವರ, ಉಸಿರಾಟದ ತೊಂದರೆ, ಕ್ಷೀಣ ಧ್ವನಿ, ಬಾಯಾರಿಕೆ, ಕಫದೊಂದಿಗೆ ರಕ್ತವೂ ಮಿಶ್ರಿತವಾಗಬಹುದು. ಕ್ಷತಜ ಕಾಸದಲ್ಲಿ ಆಶುಕಾರಿ ಚಿಕಿತ್ಸೆಯನ್ನು ಯೋಜಿಸಬೇಕು. ಆಡಿನ ಹಾಲು, ಜೀವನೀಯ ದ್ರವ್ಯಗಳಿಂದ ಚಿಕಿತ್ಸೆ, ದೇಶೀ ಗೋವಿನ ಹಾಲು, ತುಪ್ಪ, ಜೇನುತುಪ್ಪ, ಉದ್ದು, ಆಡುಸೋಗೆ, ಅರಗು, ಶ್ವಾಸಕೋಶದ ಬಲ ಹೆಚ್ಚಿಸುವ ಚ್ಯವನಪ್ರಾಶ ಮೊದಲಾದ ಲೇಹ್ಯಗಳು ಅತ್ಯುಪಯುಕ್ತವಾಗಿವೆ.
5. ಕ್ಷಯಜ ಕಾಸ: ಹೆಸರೇ ನೇರವಾಗಿ ಸೂಚಿಸುವಂತೆ ಕ್ಷಯರೋಗದ ಲಕ್ಷಣವಾಗಿ ಕಂಡುಬರುವ ಕೆಮ್ಮು. ಇಂದಿನ ಟ್ಯುಬರ್ಕ್ಯುಲೋಸಿನ್ ಅಂದೇ ಇತ್ತೆಂಬುದಕ್ಕೆ ಇದು ಪುರಾವೆ. ಸರಿಯಾದ ಆಹಾರ ಅಭ್ಯಾಸ ಇಲ್ಲದಿರುವುದರಿಂದ, ದೇಹಕ್ಕೆ ಒಗ್ಗಿಕೊಳ್ಳದ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ, ಅತಿಯಾದ ಲೈಂಗಿಕ ಕ್ರಿಯೆಗಳಿಂದ, ಸಹಜವಾದ ಶರೀರದ ವೇಗಗಳನ್ನು ತಡೆಯುವುದರಿಂದ, ಹತಾಶೆಯ ಮನೋಭಾವದಿಂದ, ಮಾನಸಿಕ ಒತ್ತಡದಿಂದ ಆಹಾರವನ್ನು ಜೀರ್ಣಗೊಳಿಸುವ ಅಗ್ನಿಯು ಬಲಹೀನವಾಗಿ ದೇಹವು ಕ್ಷೀಣಿಸುತ್ತಾ ಹೋಗುವುದು ಕ್ಷಯದ ಮುಖ್ಯ ಲಕ್ಷಣ. ದುರ್ವಾಸನೆಯುಳ್ಳ, ಹಸಿರು ಬಣ್ಣದ, ರಕ್ತಮಿಶ್ರಿತ ಕಫವನ್ನು ರೋಗಿಯು ಉಗುಳುತ್ತಿರುತ್ತಾನೆ. ಶರೀರವು ಒಮ್ಮೆ ಶೀತಲ, ಮಗದೊಮ್ಮೆ ಬಿಸಿಯಾಗಿರುತ್ತದೆ. ಚರ್ಮ, ಮುಖಗಳು ಸ್ನಿಗ್ಧವಾಗಿದ್ದು ಕಣ್ಣು ಎದ್ದುಕಾಣುತ್ತದೆ, ಕೈಕಾಲುಗಳು ನಯವಾಗಿರುತ್ತವೆ. ಜ್ವರವು ಮಿಶ್ರಲಕ್ಷಣವನ್ನು ಹೊಂದಿದ್ದು ಎದೆಯ ಪಕ್ಕೆಗಳಲ್ಲಿ ನೋವು, ಶೀತ ನೆಗಡಿ, ಬಾಯಿರುಚಿಯಿಲ್ಲದಿರುವುದು, ಕೆಲವೊಮ್ಮೆ ಭೇದಿ ಅಥವಾ ಮಲಬದ್ಧತೆ ವಿನಾಕಾರಣ ಕಾಣಿಸಿಕೊಳ್ಳುತ್ತವೆ. ಚರಕ ಸಂಹಿತೆಯಲ್ಲಿ ಈ ಎಲ್ಲಾ ವಿವರಣೆಗಳಿವೆ. ಸುಶ್ರುತ ಸಂಹಿತೆಯಲ್ಲಿ ಇನ್ನಷ್ಟು ವಿವರಣೆಯನ್ನು ಕ್ಷಯಜ ಕಾಸಕ್ಕೆ ಸಂಬಂಧಿಸಿದಂತೆ ಕಾಣಬಹುದು.
ಮೈಕೈ ನೋವು, ಜ್ವರ, ಮೈಉರಿ, ಮಾನಸಿಕ ತಳಮಳ, ವೇಗವಾದ ಉಸಿರಾಟ, ಕೆಮ್ಮು ರಕ್ತ ಹಾಗೂ ಕಫಯುಕ್ತವಾಗಿದ್ದು ದೇಹವು ತೀವ್ರವಾಗಿ ಬಲ ಕಳೆದುಕೊಂಡು ಕ್ಷೀಣವಾಗುತ್ತದೆ. ಶೀಘ್ರವೇ ಮೃತ್ಯು ತಂದೊಡ್ಡಬಹುದೆಂದು ಎಚ್ಚರಿಸಲಾಗಿದೆ. ಕ್ಷಯಜ ಕಾಸದಲ್ಲಿ ಶರೀರದ ಮಾಂಸಧಾತುವಿಗೆ ಬಲತುಂಬುವ ಬೃಂಹಣ ಚಿಕಿತ್ಸೆ ಹಾಗೂ ಪಚನಶಕ್ತಿಯನ್ನು ವರ್ಧಿಸುವ ಚಿಕಿತ್ಸೆ ಅತ್ಯವಶ್ಯಕ. ಮೃದುವಾದ ವಿರೇಚನ ಚಿಕಿತ್ಸೆ, ಚಿತ್ರಮೂಲ, ಅಮೃತಬಳ್ಳಿ, ಆಡುಸೋಗೆ, ಅಳಲೆಕಾಯಿ, ಸಾವಯವ ಒಣದ್ರಾಕ್ಷಿ, ಲವಂಗ, ಏಲಕ್ಕಿ, ಸಿಹಿಹಾಲೆ, ಕಾಳುಮೆಣಸು, ಹಿಪ್ಪಲಿ, ಶುಂಠಿ, ಕಂಠಕಾರೀ, ಬಾರಂಗೀ ಮೊದಲಾದ ನೂರಾರು ಔಷಧೀಯ ದ್ರವ್ಯಗಳು ಚಿಕಿತ್ಸೆಯಲ್ಲಿ ನುರಿತ ವೈದ್ಯರಿಂದ ಬಳಸಲ್ಪಡುತ್ತದೆ.
ಕೆಮ್ಮಿನೊಂದಿಗೆ ಅತಿಯಾದ ಬಾಯಾರಿಕೆ ಇದ್ದಾಗ ಆಡಿನ ಹಾಲಿನಿಂದ ತಯಾರಿಸಿದ ತುಪ್ಪ, ಬಾಯಿ ಹಾಗೂ ಮೂಗಿನಿಂದ ರಕ್ತಸ್ರಾವವಿದ್ದಾಗ ಔಷಧೀಯ ಘೃತದಿಂದ ನಸ್ಯಕರ್ಮ, ದೇಹವು ತೀವ್ರವಾಗಿ ದುರ್ಬಲವಾಗಿದ್ದಾಗ ಔಷಧಿಯುಕ್ತ ಪೇಯಗಳು, ಇವುಗಳಲ್ಲದೆ ಬಹುವಿಧದ ಪರಿಣಾಮಕಾರೀ ಔಷಧಗಳನ್ನು ಆಯುರ್ವೆದದಲ್ಲಿ ಹೇಳಲಾಗಿದ್ದು ವೈದ್ಯರ ವಿವೇಚನಾಯುಕ್ತ ಚಿಕಿತ್ಸೆಯಿಂದ ಬಹುವಾಗಿ ಪೀಡಿಸುತ್ತಿರುವ ಕೆಮ್ಮನ್ನು ಮೂಲದಿಂದಲೇ ಗೆಲ್ಲಬಹುದು.