

ಬೆಂಗಳೂರು: ದೇವನಹಳ್ಳಿ ಏರೋಸ್ಪೇಸ್ ಪಾರ್ಕ್‌ಗಾಗಿ ನಿಗದಿಪಡಿಸಿದ್ದ ಭೂಮಿ ಸ್ವಾಧೀನ ಕೈಬಿಟ್ಟ ಬೆನ್ನಲ್ಲೇ ಹೂಡಿಕೆದಾರರಿಗೆ ಗಾಳ ಹಾಕಿರುವ ಆಂಧ್ರಕ್ಕೆ ರಾಜ್ಯ ಸರ್ಕಾರ ತಿರುಗೇಟು ನೀಡಿದೆ.
ಡಿಫೆನ್ಸ್ ಮತ್ತು ಏರೋಸ್ಪೇಸ್ ಪಾರ್ಕ್ ಸ್ಥಾಪನೆಗೆ ದೇವನಹಳ್ಳಿಯಲ್ಲಿ ಗುರುತಿಸಿದ್ದ ಭೂಮಿಯನ್ನು ರೈತರ ಹಿತದೃಷ್ಟಿಯಿಂದ ಕೈಬಿಡಬೇಕಾಯಿತು. ಉದ್ಯಮಿಗಳು ಕೇಳಿದ ಕಡೆ ಜಮೀನು ಕೊಡಲಾಗುತ್ತದೆ. ಆಂಧ್ರಪ್ರದೇಶದ ಸಚಿವ ನಾರಾ ಲೋಕೇಶ್ ಕರೆದಾಕ್ಷಣ ಯಾವ ಉದ್ಯಮಿಯೂ ಇಲ್ಲಿಂದ ಹೋಗುವುದಿಲ್ಲ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದ ಏರೋಸ್ಪೇಸ್ ವಲಯಕ್ಕೆ ರಾಜ್ಯವು ಶೇ.65 ಕೊಡುಗೆ ನೀಡುತ್ತಿದೆ. ರಾಷ್ಟ್ರೀಯವಾಗಿ ರಾಜ್ಯವು ಪ್ರಥಮ ಸ್ಥಾನದಲ್ಲಿದೆ. ಜಾಗತಿಕವಾಗಿ 3ನೇ ಸ್ಥಾನದಲ್ಲಿದೆ. ಏರೋಸ್ಪೇಸ್ ಮಾತ್ರವಲ್ಲದೆ ಯಾವುದೇ ಉದ್ಯಮ ಸ್ಥಾಪನೆಗೆ ಭೂಮಿ, ನೀರು ಮತ್ತು ಅಗತ್ಯ ನೆರವು ನೀಡುತ್ತೇವೆ ಎಂದು ಹೇಳಿದರು.
ನಾರಾ ಲೋಕೇಶ್ ಟ್ವಿಟ್ ನೋಡಿದ್ದೇನೆ. ನಾನು ಅಲ್ಲೇ ಉತ್ತರ ಕೊಟ್ಟಿದ್ದೇನೆ. ಎಂ.ಬಿ.ಪಾಟೀಲ್‌ಗೂ ಸಾಮರ್ಥ್ಯವಿದೆ ಎಂದು ತೋರಿಸುತ್ತೇನೆ. ಏರೋಸ್ಪೇಸ್ ಮಾತ್ರವಲ್ಲ, ಎಐ, ಡೀಪ್- ಟೆಕ್, ಐಟಿ ಹೀಗೆ ಎಲ್ಲ ತರಹದ ಉದ್ಯಮಗಳಿಗೂ ಭೂಮಿ ಇದೆ. ಒಬ್ಬ ಉದ್ಯಮಿಯೂ ರಾಜ್ಯದಿಂದ ಹೊರಹೋಗಲು ಬಿಡುವುದಿಲ್ಲ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದರು.
ಏರೋಸ್ಪೇಸ್ ಉದ್ಯಮಿಗಳಿಗೆ ಭೂಮಿ ಜತೆಗೆ ನೀರು, ವಿದ್ಯುತ್ ಕೊಡುತ್ತೇವೆ. ಕೈಗಾರಿಕಾ ಪ್ರದೇಶಗಳಿಗೆ ನೀರು ಬಳಸಿಕೊಳ್ಳಲು 3,600 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಯೋಜನೆ ರೂಪಿಸಲಾಗಿದೆ ಎಂದು ಪಾಟೀಲ್ ವಿವರಿಸಿದರು. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಈಗ ಉದ್ಯಮಿಗಳ ಪರವಾಗಿ ಮಾತನಾಡುತ್ತಿದ್ದಾರೆ. ಸರ್ಕಾರ ಏನಾದರು ದೇವನಹಳ್ಳಿ ತಾಲೂಕಿನಲ್ಲಿ ರೈತರ ಜಮೀನನ್ನು ಸ್ವಾಧೀನಪಡಿಸಿಕೊಂಡಿದ್ದರೆ ಆಗ ರೈತರ ಪರವಾಗಿ ಮಾತನಾಡುತ್ತಿದ್ದರು. ಪ್ರತಿಪಕ್ಷಗಳು ಏನಾದರೂ ಮಾಡಿಕೊಳ್ಳಲಿ. ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಪಾಟೀಲ್ ಪ್ರತಿಕ್ರಿಯಿಸಿದರು.