ಬರುವೆಯಲ್ಲಿ ಮತಯಂತ್ರ ಅಸಂಬದ್ಧ ಜೋಡಣೆ

halappa voting
ರಿಪ್ಪನ್‌ಪೇಟೆ ಸಮೀಪದ ಹರತಾಳು ಗ್ರಾಮದಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಹಕ್ಕು ಚಲಾಯಿಸಿದರು.
Published on

ರಿಪ್ಪನ್‌ಪೇಟೆ: ಪಟ್ಟಣದ ಬರುವೆ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಎಡವಟ್ಟಿನಿಂದ ಮತದಾರರಲ್ಲಿ ಗೊಂದಲ ಉಂಟಾಗಿ ಮತದಾನ ಪ್ರಕ್ರಿಯೆ ಕೆಲಕಾಲ ಸ್ಥಗಿತವಾಗಿತ್ತು.

ರಿಪ್ಪನ್‌ಪೇಟೆ ಗ್ರಾಮ ಪಂಚಾಯಿತಿಯ ಬರುವೆ ಮತಗಟ್ಟೆ ಸಂಖ್ಯೆ 216ರಲ್ಲಿ ಮತಯಂತ್ರಗಳು ಒಂದರ ನಂತರ ಇನ್ನೊಂದು ಕ್ರಮವಾಗಿಡಬೇಕಿದ್ದ ಬದಲಾಗಿ ಎರಡನೇ (ಬ್ಯಾಲೆಟ್) ಮತಯಂತ್ರ ಮೊದಲಿಟ್ಟು ನಂತರ ಒಂದನೇ ಮತಯಂತ್ರವನ್ನು ಇಡಲಾಗಿತ್ತು. ಇದರಿಂದ ಗೊಂದಲಕ್ಕೀಡಾದ ಮತದಾರರು ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತಂದರು. ಆದರೆ ಮತಗಟ್ಟೆ ಅಧಿಕಾರಿ ತಾವು ಇರಿಸಿದ್ದೇ ಸರಿ ಎಂದು ವಾದಿಸಿದರು. ಇದಕ್ಕೆ ಆಕ್ಷೇಪಿಸಿದ ಬಿಜೆಪಿ ಮುಖಂಡ ಸುರೇಶ್ ಸಿಂಗ್ ಮೇಲಧಿಕಾರಿಗಳು ಬಂದು ಪರಿಶೀಲಿಸುವವರೆಗೆ ಮತದಾನ ಮಾಡಿಸಬೇಡಿ ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿ ಮತಗಟ್ಟೆಗೆ ಆಗಮಿಸಿ ನ್ಯೂನತೆ ಸರಿಪಡಿಸಿದ ನಂತರ ಮತದಾನಕ್ಕೆ ಅವಕಾಶ ಕಲ್ಪಿಸಲಾಯಿತು.
ಪಟ್ಟಣದ ಮತಗಟ್ಟೆ ಸಮೀಪವೇ ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಭ್ಯರ್ಥಿಯ ಭಾವಚಿತ್ರ ಹಿಡಿದುಕೊಂಡಿದ್ದರು. ಚೀಟಿಯಲ್ಲಿ ಮತದಾರರ ಕ್ರಮ ಸಂಖ್ಯೆ, ಹೆಸರು ನಮೂದಿಸಿ ವಿತರಿಸಲಾಗುತ್ತಿತ್ತು. ಅಲ್ಲದೇ ಕಾರ್ಯಕರ್ತರು ತಮ್ಮ ಪಕ್ಷಗಳಿಗೆ ಸಂಬಂಧಿಸಿದ ಶಾಲು ಧರಿಸಿ ಮತಯಾಚನೆ ಮಾಡುತ್ತಿರುವುದನ್ನು ಗಮನಿಸಿದ ಚುನಾವಣಾ ಅಧಿಕಾರಿಗಳು ಚುನಾವಣಾ ನೀತಿಸಂಹಿತೆ ಉಲ್ಲಂಘನೆಯ ಚಟುವಟಿಕೆಗಳಿಗೆ ಅವಕಾಶವಿಲ್ಲವೆಂದು ಶಾಲು ಮತ್ತು ಚೀಟಿಗಳನ್ನು ತೆರವುಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net