

ಆನಂದಪುರ: ಚೆನ್ನಶೆಟ್ಟಿಕೊಪ್ಪ ಗ್ರಾಮದ ಶೀಲವಂತ ದೇವರಿಗೆ ಸೋಮವಾರ ಸಾವಿರಾರು ಎಡೆ ಇಟ್ಟು ಪುರೋಹಿತರ ಮೂಲಕ ನೋನಿ ಪೂಜೆ ನೆರವೇರಿಸಲಾಯಿತು.
ಗ್ರಾಮದಲ್ಲಿ ನೋನಿ ಹಬ್ಬದ ಆಚರಣೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಒಟ್ಟು 48 ದೇವತೆಗಳ ಆವಾಸವಿದೆ. ಬೆಳ್ಳಿ, ತಾಮ್ರ, ಹಿತ್ತಾಳೆ, ಕಂಚು ಇತ್ಯಾದಿ ಲೋಹದಿಂದ ತಯಾರಿಸಲ್ಪಟ್ಟ ದೇವರ ವಿಗ್ರಹಳನ್ನು ಅಕ್ಕಿಯ ರಾಶಿಯಲ್ಲಿಟ್ಟು ಪೂಜಿಸಲಾಗುತ್ತದೆ. ದೇವರ ವಿಗ್ರಹಗಳನ್ನು ಪೂಜೆಯ ನಂತರ ಗಡಿಗೆಯಲ್ಲಿ ತುಂಬಿ ಮಣ್ಣಿನಲ್ಲಿ ಹೂತು ಇಡಲಾಗುತ್ತದೆ. ಪ್ರತಿ ವರ್ಷ ನರಕ ಚತುರ್ದಶಿಯಂದು ಮತ್ತೆ ಮಣ್ಣಿನಿಂದ ಮೇಲಕ್ಕೆ ತೆಗೆದು ನೀರಿನಿಂದ ಅಭಿಷೇಕ ಮಾಡಿಸಿ ಪೂಜೆ ನಡೆಸಲಾಗುತ್ತದೆ.
ವರ್ಷದ ಉಳಿದ ದಿನಗಳಂದು ಮಣ್ಣಿನೊಳಗೆ ಗಡಿಗೆಯಲ್ಲಿ ಭದ್ರವಾಗಿ ನೆಲದೊಡಲು ಸೇರುತ್ತದೆ. ಆಗಮಿಕ ಪುರೋಹಿತರು ಮಂತ್ರೋಚ್ಚಾರದೊಂದಿಗೆ ದೇವರುಗಳ ವಿಗ್ರಹವನ್ನು ಮಣ್ಣಿನಿಂದ ತೆಗೆದು ವಿಧಿಬದ್ಧವಾಗಿ ಪೂಜೆ ನಡೆಸಿದರು. ಗ್ರಾಮದಲ್ಲಿ 132 ಕುಟುಂಬಗಳಿದ್ದು ಜಮೀನಿನಲ್ಲಿರುವ ಎಲ್ಲ ದೇವರನ್ನು ಸ್ಮರಿಸಿ ಇಲ್ಲಿ ಎಡೆ ಇಡಲಾಯಿತು. ಪೂಜೆ ಬಳಿಕ ಆಯಾ ದೇವರ ಕಲ್ಲಿನ ಬಳಿ ಹೋಗಿ ನೈವೇದ್ಯ ಸಮರ್ಪಿಸಿದರು.