

ಮೈಸೂರು: ರಾಜ್ಯಕ್ಕೆ ಏನಾದರು ಕೊಡುಗೆ ನೀಡಬೇಕು ಎಂಬುದು ನನ್ನ ಬಯಕೆಯಾಗಿದೆ. ಇದಕ್ಕೆ ಪೂರಕವಾಗಿ ಅಂಕಿ ಅಂಶಗಳ ಅವಶ್ಯಕತೆ ಇದೆ. ಆದರೆ, ನಾನು ಕರೆಯುವ ಸಭೆಗಳಿಗೆ ಹಾಜರಾಗದಂತೆ ಅಧಿಕಾರಿಗಳಿಗೆ ಸರ್ಕಾರ ನಿರ್ದೇಶನ ನೀಡುತ್ತಿದೆ. ಹೀಗಾದರೆ ಮಾಹಿತಿ ಪಡೆಯುವುದು ಹೇಗೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಂಜನಗೂಡು ಸರ್ಕಾರಿ ಅತಿಥಿ ಗೃಹದಲ್ಲಿ ನನಗೆ ಲಘು ವಿಶ್ರಾಂತಿ ಪಡೆಯಲು ಅತಿಥಿ ಗೃಹ ದೊರೆಯದೆ ಇರುವ ಕುರಿತು ಪ್ರತಿಕ್ರಿಯಿಸಲು ಬಯಸುವುದಿಲ್ಲ. ರಾಜಕಾರಣದಲ್ಲಿ ಇದೆಲ್ಲ ನಡೆಯುತ್ತಿರುತ್ತದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಅಧಿಕಾರ ವಹಿಸಿಕೊಂಡು ಕೇವಲ ಒಂದು ತಿಂಗಳು ಆಗಿದೆ. 6-7 ತಿಂಗಳು ಕಾಯಿರಿ, ರಾಜ್ಯಕ್ಕೆ ನನ್ನ ಕೊಡುಗೆ ಏನು ಎಂಬುದಕ್ಕೆ ಉತ್ತರ ನೀಡುತ್ತೇನೆ. ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಏಕಾಂಗಿಯಾಗಿ ಸದನದಲ್ಲಿ ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಸಹ ಮಾತುಕತೆ ನಡೆಸಿದ್ದಾರೆ. ಆದರೆ, ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಏತಕ್ಕೆ ಧ್ವನಿಗೂಡಿಸುತ್ತಿಲ್ಲ. ಕಾವೇರಿ ನದಿ ನೀರು ಸಮಸ್ಯೆ ಸೇರಿದಂತೆ ರಾಜ್ಯದ ಹಲವು ಸಮಸ್ಯೆಗಳನ್ನು ಒಂದು ರಾತ್ರಿಯಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಸ್ವಲ್ಪ ಕಾಲಾವಕಾಶ ನೀಡಿ ಎಂದರು.