ರದ್ದಾಗುವುದಿಲ್ಲ ಗ್ಯಾರಂಟಿ ಯೋಜನೆಗಳು

ks anand
ಶಾಸಕ ಕೆ.ಎಸ್.ಆನಂದ್
Published on

ಕಡೂರು: ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆಗಳು ರದ್ದಾಗುತ್ತವೆ ಎಂಬ ಅಪಪ್ರಚಾರಕ್ಕೆ ಜನರು ಕಿವಿಗೊಡಬಾರದು. ಸರ್ಕಾರ ಯಾವುದೇ ಯೋಜನೆಯನ್ನು ಜಾರಿ ಮಾಡಿದ ನಂತರ ಅದನ್ನು ಸ್ಥಗಿತಗೊಳಿಸಲು ಬರುವುದಿಲ್ಲ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಂಚನಹಳ್ಳಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, 8 ತಿಂಗಳಿನಿಂದ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿವೆ. ರಾಜ್ಯ ಸರ್ಕಾರಕ್ಕೆ ಯಾವುದೇ ಆರ್ಥಿಕ ಸಮಸ್ಯೆ ಎದುರಾಗಿಲ್ಲ. ಗ್ಯಾರಂಟಿ ಯೋಜನೆಗಳ ಜತೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯುತ್ತಿವೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರಿಗೆ ಆರ್ಥಿಕವಾಗಿ ಸಹಕಾರಿಯಾಗಿದೆ. ಗ್ಯಾರಂಟಿ ಯೋಜನೆಗಳಿಂದ ಒಂದು ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 25 ಸಾವಿರ ರೂ. ತಲುಪಿಸಿದಂತಾಗುತ್ತದೆ. ಇದು ಬಡತನ ನಿರ್ಮೂಲನೆಗೆ ಪೂರಕವಾಗಿದೆ. ಆದರೆ ಗ್ಯಾರಂಟಿ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ವಿರೋಧಿಗಳು ಬೊಬ್ಬೆ ಹೊಡೆದುಕೊಳ್ಳುತ್ತಾರೆ ಎಂದು ಹೇಳಿದರು.
ಜನರ ಸಮಸ್ಯೆಗಳನ್ನು ಅರಿಯಲು ಮತ್ತು ಶೀಘ್ರ ಬಗೆಹರಿಸುವ ಉದ್ದೇಶದಿಂದ 6 ತಿಂಗಳಿಗೊಮ್ಮೆ ಕ್ಷೇತ್ರದಲ್ಲಿ ಹೋಬಳಿವಾರು ಜನಸ್ಪಂದನಾ ಸಭೆಗಳನ್ನು ಏರ್ಪಡಿಸಲಾಗುತ್ತದೆ ಎಂದರು.
ತಹಸೀಲ್ದಾರ್ ಎಂ.ಪಿ.ಕವಿರಾಜ್ ಮಾತನಾಡಿ, ಐದು ಗ್ಯಾರಂಟಿಗಳ ಸವಲತ್ತುಗಳನ್ನು ಪಡೆಯಲು ಎದುರಾಗಿರುವ ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸಲು ಜನಸ್ಪಂದನಾ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.
ನಿಡುವಳ್ಳಿ ಗ್ರಾಪಂ ಆಧ್ಯಕ್ಷ ಎನ್.ಸಿ.ಕಾಂತರಾಜು ಮಾತನಾಡಿ, ರಾಜ್ಯದಲ್ಲಿಯೆ ಮೊದಲ ಜನಸ್ಪಂದನಾ ಸಭೆ ಕಡೂರಿನಲ್ಲಿ ನಡೆಸಲಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ದೊರೆಯಬೇಕು ಎನ್ನುವ ಕಾರಣಕ್ಕೆ ಕಾಂಗ್ರೆಸ್ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಗೃಹಲಕ್ಷ್ಮೀ ಯೋಜನೆಯಿಂದ ಬರುವ 2 ಸಾವಿರ ರೂ. ಕುಟುಂಬದ ನಿರ್ವಹಣೆಗೆ ಬಳಕೆಯಾಗುತ್ತಿದೆ ಎಂದು ಹೇಳಿದರು. ತಾಪಂ ಇಒ ಸಿ.ಆರ್.ಪ್ರವೀಣ್, ಆಹಾರ ನಿರೀಕ್ಷಕಿ ಶಿಲ್ಪಾ, ಗ್ರಾಪಂ ಅಧ್ಯಕ್ಷರಾದ ಎನ್.ಸಿ.ಕಾಂತರಾಜ್, ರತ್ನಮ್ಮ, ಸರೋಜಾಬಾಯಿ, ಮುರಳಿ, ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net