

ಧರ್ಮಸಂಕಟಗಳಲಿ, ಜೀವಸಮರದಲಿ||
ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ|
ನಿರ್ವಿುತ್ರನಿರಲು ಕಲಿ ಮಂಕುತಿಮ್ಮ||689||
ಜೀವನದ ಉತ್ಕಟಕ್ಷಣಗಳಲ್ಲಿ, ಧರ್ಮಸಂಕಟಕ್ಕೆ ಒಳಗಾದ ಸಂದರ್ಭದಲ್ಲಿ, ಬದುಕಿನ ಹೋರಾಟದಲ್ಲಿ, ಮೋಕ್ಷದೀಕ್ಷೆಯನ್ನು ಪಡೆಯುವಾಗ ಮತ್ತು ಮರಣದ ಸಂದರ್ಭದಲ್ಲಿ ನೀನು ಒಂಟಿ. ಹಾಗಾಗಿ ಮಿತ್ರರಿಲ್ಲದೆಯೇ ಜೀವನವನ್ನು ನಡೆಸಲು, ಧರ್ಮವನ್ನು ಅನುಸರಿಸಲು ಕಲಿತಿಕೋ ಎನ್ನುತ್ತದೆ ಈ ಕಗ್ಗ.
ಸುಖಕ್ಕೆ ಸಾವಿರಾರು ನೆಂಟರು, ದುಃಖವೆಂದೆಂದಿಗೂ ಒಂಟಿ. ಪ್ರತಿಯೊಬ್ಬರಿಗೂ ಈ ಎರಡು ಅವಸ್ಥೆಗಳ ಅನುಭವವು ಇದ್ದೇಇದೆ. ಸುಖ-ಸಂತೋಷದ ಕ್ಷಣಗಳು ವ್ಯಕ್ತಿಯನ್ನು ಮೈಮರೆಯುವಂತೆ ಮಾಡಿದರೆ ದುಃಖ, ಸಂಕಷ್ಟಗಳು ವಾಸ್ತವದ ಪರಿಚಯವನ್ನು ಮಾಡುತ್ತವೆ. ಪ್ರತಿಕೂಲ ಸಂದರ್ಭವು ವ್ಯಕ್ತಿಗೆ ಅವನ ಸಾಮರ್ಥ್ಯವನ್ನು, ಬಾಂಧವ್ಯಗಳ ನಿಜಸ್ವರೂಪವನ್ನು ತಿಳಿಸುತ್ತದೆ.
ಜೀವನದಲ್ಲಿ ಅವೆಷ್ಟೋ ಕೆಟ್ಟ ಸನ್ನಿವೇಶಗಳನ್ನು ಎದುರಿಸುವುದುಂಟು. ಸರಿಯಾದ ನಿರ್ಧಾರಕ್ಕೆ ಬರಲಾಗದೆ ಅಸಹಾಯಕ ರಾಗುವ, ಎದುರಿಸಲು ಶಕ್ತಿ ಇಲ್ಲದೆ ಕುಸಿಯುವ, ಮನಸ್ಸಿಗಾದ ಆಘಾತದಿಂದ ಶೂನ್ಯಭಾವಕ್ಕೆ ಒಳಗಾಗುವ ಸ್ಥಿತಿಯು ಮತ್ತೆಮತ್ತೆ ಎದುರಾ ಗುತ್ತವೆ. ಆಗ ಸಹಾಯ-ಸಾಂತ್ವನಕ್ಕಾಗಿ ಸುತ್ತಲೂ ಆರ್ತರಾಗಿ ಅರಸು ವುದೂ ಸುಳ್ಳಲ್ಲ. ಆದರೆ ಇಂಥ ನಿರ್ಣಾಯಕ ಘಟ್ಟದಲ್ಲಿ ವ್ಯಕ್ತಿಯು ಒಬ್ಬಂಟಿ. ಜೀವನ ಯಾನದಲ್ಲಿ ತಂದೆ-ತಾಯಿ, ಗಂಡ-ಮಕ್ಕಳು ಮುಂತಾದ ಹತ್ತಿರದ ಸಂಬಂಧಗಳೂ ಕೂಡ, ಒಂದು ಹಂತದವರೆಗೆ ಮಾತ್ರ ಜೊತೆಗೂಡಬಲ್ಲರು. ವ್ಯಕ್ತಿಯು ಉತ್ಕಟ ಸನ್ನಿವೇಶಗಳನ್ನು ಒಂಟಿಯಾಗಿಯೇ ನಿಭಾಯಿಸಬೇಕಾಗುತ್ತದೆ.
ಇದೇ ರೀತಿ ಸರಿ-ತಪ್ಪುಗಳ ಜಿಜ್ಞಾಸೆಯು ವ್ಯಕ್ತಿಯನ್ನು ಮತ್ತೆಮತ್ತೆ ಕಾಡುತ್ತದೆ. ನುಡಿಯಲಾರದೆ, ನುಡಿಯದಿರಲಾರದೆ ಒದ್ದಾಡುವಂತಾಗುವುದು, ಮನಸ್ಸಿಲ್ಲದಿದ್ದರೂ ಕೆಲಸವನ್ನು ಮಾಡ ಬೇಕಾದ ಸಂದಿಗ್ಧತೆ, ನ್ಯಾಯ-ಅನ್ಯಾಯಗಳನ್ನು ಗುರುತಿಸಲಾಗದೆ ಇಕ್ಕಟ್ಟಿಗೆ ಸಿಲುಕುವುದು ಎಲ್ಲರ ಅನುಭವ. ಇಂಥ ಸಂದರ್ಭದಲ್ಲಿ ಹಲವರಲ್ಲಿ ತನ್ನ ಸಮಸ್ಯೆಯನ್ನು, ದುಗುಡ-ದುಮ್ಮಾನಗಳನ್ನು ಹೇಳಿಕೊಂಡರೆ ಸಮಸ್ಯೆಯು ಇನ್ನಷ್ಟೂ ಕಗ್ಗಂಟಾದಿತೇ ಹೊರತು ಪರಿಹಾರವನ್ನು ಕಾಣಲಾರದು. ವ್ಯಕ್ತಿಯು ತನ್ನ ಮನವನ್ನು ಸದಾ ಮಥಿಸುತ್ತಾ, ಸರಿಯಾದುದು ಯಾವುದೆಂದು ವಿವೇಚನೆಯಿಂದ ಕಂಡುಕೊಂಡರೆ, ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದು ಕೊಂಡರೆ ಮಾತ್ರ ಸಮಸ್ಯೆಯು ದೂರವಾದೀತು. ಶೋಧನೆಗೆ ಒಳಗಾದ ಮನಸ್ಸು ದುರ್ಭರವಾದ ಸಂದರ್ಭದ ನಂತರ ಹದವಾಗುತ್ತದೆ. ಅರಿವು ವಿಸ್ತರಿಸುತ್ತದೆ.
ಬದುಕೆಂದರೆ ಹೋರಾಟ. ಅದರಲ್ಲೂ ಬಡತನ ಮತ್ತು ಅಜ್ಞಾನದ ಕಪಿಮುಷ್ಟಿಗೆ ಸಿಲುಕಿತೆಂದರೆ ವ್ಯಕ್ತಿಯ ಸ್ಥಿತಿಯು ಇನ್ನಷ್ಟು ಬಿಗಡಾಯಿಸುತ್ತದೆ. ಶ್ರೀಮಂತಿಕೆಗೆ ಸನ್ಮಾನ, ಬಡತನಕ್ಕೆ ಅವಮಾನ ಸರ್ವೆಸಾಮಾನ್ಯ. ರಕ್ತ ಸಂಬಂಧವೇ ಆಗಿದ್ದರೂ ಬದುಕಿನ ಕದನದಲ್ಲಿ ಜೊತೆಗುಳಿಯುವುದು ವಿರಳ. ಪ್ರಯೋಜನವೇ ಕಾರಣವಾಗಿ ಜೊತೆಗೂಡುವ ಸಂಬಂಧಗಳು ಲಾಭವಿಲ್ಲದೆ ಇದ್ದರೆ ಸದ್ದಿಲ್ಲದೆ ದೂರ ಸರಿಯುತ್ತವೆ. ಹಾಗಾಗಿ ಬದುಕಿನ ಕದನದಲ್ಲಿ ವ್ಯಕ್ತಿಯು ಒಬ್ಬಂಟಿಯೇ. ವ್ಯಕ್ತಿಯ ಲೋಕಾನುಭವ ಮತ್ತು ವಿವೇಚನೆಯಿಂದ ಕೂಡಿದ ನಿರ್ಧಾರವು ಸಮಂಜಸವಾಗಿರುತ್ತದೆ.
ಇದೇ ರೀತಿ ಸಂನ್ಯಾಸಿಯಾಗಿ ಮೋಕ್ಷದೀಕ್ಷೆಯನ್ನು ಪಡೆಯುವಾಗ ಯಾವ ನಂಟನ್ನೂ ಜೊತೆಗೆ ಇಟ್ಟುಕೊಳ್ಳುವುದಕ್ಕಿಲ್ಲ. ಸರ್ವ ಸಂಗವನ್ನೂ ತ್ಯಾಗ ಮಾಡಿ ಸತ್ಯದ ಸಾಕ್ಷಾತ್ಕಾರಕ್ಕಾಗಿ ಹೊರಟು ನಿಂತವನಿಗೆ ಯಾವ ನಂಟಿನ ಹಂಗಿರಬಾರದು. ಕೊನೆಗೆ ತನ್ನ ಒಡನಾಡಿಗಳಾಗಿದ್ದ ಇತರ ಸಂನ್ಯಾಸಿಗಳಲ್ಲಿ, ದೀಕ್ಷೆ ನೀಡಿದ ಗುರುವಿನಲ್ಲಿಯೂ ಮೋಹ ಬೆಳೆಯಕೂಡದು. ಅದು ಆತನ ಸಾಧನೆಗೆ ತೊಡಕು. ಜನಿಸಿದಾಕ್ಷಣವೇ ಸುತ್ತಿಕೊಳ್ಳುವ ಬಾಂಧವ್ಯದ ಎಳೆಗಳು ಬದುಕಿನುದ್ದಕ್ಕೂ ಎಳೆದಾಡುತ್ತವೆ. ಕೊನೆಗೆ ಮರಣದ ಹೊತ್ತಿನಲ್ಲಿ ವ್ಯಕ್ತಿಯು ಒಬ್ಬಂಟಿಯಾಗಿಯೇ ಸಾವಿನ ಹೊಸ್ತಿಲನ್ನು ದಾಟಬೇಕಾಗುತ್ತದೆ. ಎಷ್ಟೇ ಹತ್ತಿರದ ಸಂಬಂಧವೇ ಆಗಿದ್ದರೂ ದೇಹ ತೊರೆದು ಜೀವವು ಹೊರಟಾಗ ಜೊತೆಯಾಗಲು ಸಾಧ್ಯವಿಲ್ಲ.
ಹಾಗಾಗಿ ಯಾರನ್ನೂ, ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳು ವುದು, ಮೋಹಪರವಶರಾಗುವುದು ಸರಿಯಲ್ಲ. ಬದುಕಿನ ಸಂಕಷ್ಟ ಗಳ ಸಂದರ್ಭದಲ್ಲಿ, ದ್ವಂದ್ವವು ಕಾಡಿದಾಗ, ವಿರಕ್ತಿ ಮತ್ತು ಮರಣದ ವೇಳೆಯಲ್ಲಿ ಯಾವ ಸ್ನೇಹ ಸಂಬಂಧಗಳೂ ಜೊತೆಗೂಡದು. ಮಸಣದವರೆಗೆ ಕೆಲವರು ಬರಬಹುದಾದರೂ ಸಾವಿನಾಚೆಗಿನ ಪಯಣಕ್ಕೆ ಜೊತೆಗಾರರಿಲ್ಲ. ವ್ಯಕ್ತಿಯು ಮಾಡಿದ ಸತ್ಕರ್ಮ, ಅದರ ಪುಣ್ಯವಿಶೇಷಗಳಷ್ಟೇ ಇಹಪರದಲ್ಲಿ ಜೊತೆಯಾಗಿ ನಿಲ್ಲುತ್ತವೆ.
ಈ ಸತ್ಯವನ್ನು ಅರ್ಥಮಾಡಿಕೊಂಡವನು ನಿರ್ವಿುತ್ರನಾಗುತ್ತಾನೆ. ಯಾರನ್ನೂ ಅತಿಯಾಗಿ ಮೋಹಿಸದೆ, ಯಾರ ಮೇಲೂ ಭಾವನಾತ್ಮವಾದ ಅವಲಂಬನೆ ಇಲ್ಲದೆ ನಿಷ್ಕಾಮಧರ್ಮವನ್ನು ಪಾಲಿಸುತ್ತಾನೆ. ಧರ್ಮವನ್ನು ಆಚರಿಸುವುದಕ್ಕೆ ಸ್ವಯಂ ಸಿದ್ಧನಾಗುವುದೆ ನಿಜಸಾಧನೆ.
ಡಿ ವಿ ಜಿಯವರು ಹೇಳುತ್ತಾರೆ: ನಿನ್ನ ಬದುಕಿನ ಅತ್ಯಂತ ಅಸಹನೀಯ ಕ್ಷಣಗಳಲ್ಲಿ ಸಹಾಯಕ್ಕಾಗಿ ಆಕ್ರಂದಿಸುವ ಆರ್ತನಾಗಿ ನಿಲ್ಲಬೇಡ. ಎಂದಿಗಾದರೂ ನಿನಗೆ ನೀನೇ ಆಸರೆ. ಯಾರಿಗೂ ಯಾರೂ ಇಲ್ಲ, ಯಾರೂ ಯಾರಿಗೂ ಅನಿವಾರ್ಯವಲ್ಲ.
(ಲೇಖಕರು ಉಪನ್ಯಾಸಕರು, ಕವಯಿತ್ರಿ, ಪ್ರತಿಕ್ರಿಯಿಸಿ: vvsudina@gmail.com, kaviadoor@gmail.com)