ಮೂರು ಡ್ಯಾಂಗಳಿಗೆ ಇಲ್ಲ ವಿಶ್ವ ಬ್ಯಾಂಕ್ ನೆರವು

dams
ಅಂಬ್ಲಿಗೊಳ, ಅಂಜನಾಪುರ, ಭದ್ರಾ ಜಲಾಶಯ
Published on

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯನ್ನು ಜಲಾಶಯಗಳ ತವರೂರು ಎಂದು ಹೇಳಿದರೆ ಉತ್ಪ್ರೇಕ್ಷೆಯಲ್ಲ. ಭದ್ರಾ, ಲಿಂಗನಮಕ್ಕಿ ಸೇರಿದಂತೆ ಒಟ್ಟು 12 ಡ್ಯಾಂಗಳಿವೆ. ನಾಲ್ಕು ವರ್ಷಗಳ ಹಿಂದೆ ವಿಶ್ವ ಬ್ಯಾಂಕ್ ನೆರವಿನೊಂದಿಗೆ ರಾಜ್ಯದ 52 ಅಣೆಕಟ್ಟೆಗಳ ಪುನಶ್ಚೇತನಕ್ಕೆ ಕೇಂದ್ರ ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿತ್ತು. ಈ ಪೈಕಿ ಶಿವಮೊಗ್ಗ ಜಿಲ್ಲೆಯ ಮೂರು ಡ್ಯಾಂಗಳಿದ್ದವು. ನಾಲ್ಕು ವರ್ಷಗಳ ಬಳಿಕವೂ ಈ ಪ್ರಸ್ತಾವನೆಗೆ ವೇಗ ಸಿಕ್ಕಿಲ್ಲ.

ಮೂರು ಡ್ಯಾಂಗಳಿಗೆ 105.60 ಕೋಟಿ ರೂ. ಆರ್ಥಿಕ ನೆರವು ಸಿಗಬೇಕಿತ್ತು. ವಿಶ್ವ ಬ್ಯಾಂಕ್ ನೆರವಿನೊಂದಿಗೆ ಕೇಂದ್ರ ಜಲಶಕ್ತಿ ಇಲಾಖೆ ಅನುದಾನ ನೀಡಬೇಕಿತ್ತು. ಆದರೆ ಆ ಪ್ರಸ್ತಾವನೆ ಇನ್ನೂ ಚರ್ಚೆ ಹಂತದಲ್ಲೇ ಇರುವುದರಿಂದ ಜಲಾಶಯಗಳಿಗೆ ಪುನಶ್ಚೇತನ ಭಾಗ್ಯ ಸಿಕ್ಕಿಲ್ಲ.
ಪುನಶ್ಚೇತನಕ್ಕೆ 2020ರಲ್ಲಿ ಗುರುತಿಸಲ್ಪಟ್ಟ ಮೂರು ಅಣೆಕಟ್ಟೆಗಳ ಪೈಕಿ ಎರಡು ಶಿಕಾರಿಪುರ ತಾಲೂಕಿಗೆ ಸೇರಿವೆ. 7.95 ಕೋಟಿ ರೂ. ವೆಚ್ಚದಲ್ಲಿ ಅಂಜನಾಪುರ ಹಾಗೂ 5.65 ಕೋಟಿ ರೂ. ವೆಚ್ಚದಲ್ಲಿ ಅಂಬ್ಲಿಗೊಳ ಅಣೆಕಟ್ಟೆ ಗುರುತಿಸಲಾಗಿತ್ತು. 2017ರಲ್ಲಿ 122 ಕೋಟಿ ರೂ. ವೆಚ್ಚದಲ್ಲಿ ದುರಸ್ತಿಯಾಗಿದ್ದ ಭದ್ರಾ ಜಲಾಶಯಕ್ಕೆ 2020ರಲ್ಲಿ ಮತ್ತೊಮ್ಮೆ ಕೇಂದ್ರ ಸರ್ಕಾರ 92 ಕೋಟಿ ರೂ. ಬಿಡುಗಡೆಗೆ ನಿರ್ಧರಿಸಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರಲೇ ಇಲ್ಲ.
2017ರಲ್ಲಿ ಇಂದೋರ್ ಮೂಲದ ಫೆರೋ ಕಾಂಕ್ರಿಟ್ ಇಂಡಿಯಾ ಲಿಮಿಟೆಡ್ ಕಂಪನಿ ಡ್ರಿಲ್ಲಿಂಗ್ ಮತ್ತು ಗ್ರೋಟಿಂಗ್, ಬಾಡಿ-ಗ್ಯಾಲರಿ ಗ್ರೋಟಿಂಗ್ ಹೀಗೆ ಮೂರು ಹಂತದಲ್ಲಿ ಭದ್ರಾ ಜಲಾಶಯ ನವೀಕರಣ ಕಾಮಗಾರಿ ನಡೆಸಿತ್ತು. ಭದ್ರಾ ಜಲಾಶಯದ ಫೌಂಡೇಶನ್‌ವರೆಗೂ ವಿಶೇಷವಾಗಿ ಕೋಟಿಂಗ್ ಮಾಡುವ ಮೂಲಕ ಜಲಾಶಯವನ್ನು ಇನ್ನಷ್ಟು ಸದೃಢಗೊಳಿಸಲಾಗಿತ್ತು. ನಾಲ್ಕು ಕ್ರಸ್ಟ್ ಗೇಟ್‌ಗಳು ಸ್ವಲ್ಪ ಮಟ್ಟಿಗೆ ಶಿಥಿಲಗೊಂಡಿದ್ದರಿಂದ ಅದರ ರಿಪೇರಿ ಕೆಲಸವೂ ನಡೆದಿತ್ತು. ಬಳಿಕ ಡ್ಯಾಂ ಪುನಶ್ಚೇತನಕ್ಕೆ ಅನುದಾನ ಸಿಕ್ಕಿಲ್ಲ.
ನೂರು ವರ್ಷದ ಗುರಿ: ಭದ್ರಾ ಜಲಾಶಯ ನವೀಕರಣ ಕಾಮಗಾರಿಯನ್ನು 2017-18ರಲ್ಲಿ ಕೈಗೊಳ್ಳಲಾಗಿತ್ತು. ನವೀಕರಣಕ್ಕೆ ವಿಶ್ವಬ್ಯಾಂಕ್ ನೆರವು ದೊರೆತಿತ್ತು. ಅದರ ಜತೆಗೆ ಸರ್ಕಾರದ ಅನುದಾನ ಸೇರಿ ಒಟ್ಟು 120 ಕೋಟಿ ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪೈಕಿ 30 ಕೋಟಿ ರೂ. ಮಾತ್ರ ಬಿಡುಗಡೆಯಾಗಿತ್ತು. ಮುಖ್ಯವಾಗಿ ಜಲಾಶಯದ ಅಡಿಪಾಯವನ್ನು ಸುಭದ್ರಗೊಳಿಸುವುದು ಕಾಮಗಾರಿಯ ಮುಖ್ಯ ಉದ್ದೇಶವಾಗಿತ್ತು. ಆ ಮೂಲಕ ಇನ್ನು 100 ವರ್ಷಗಳ ಕಾಲ ಜಲಾಶಯದಲ್ಲಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೆಚ್ಚಿಸುವ ಗುರಿ ಹೊಂದಲಾಗಿತ್ತು. ಆದರೆ ಹೆಚ್ಚಿನ ಹಣ ಬಿಡುಗಡೆಯಾಗದ ಕಾರಣ ಸೀಮಿತವಾಗಿ ನಿರ್ವಹಣೆ ಮಾಡಲಾಗಿತ್ತು.
ಭದ್ರಾಗೆ ಸ್ಟೀಲ್ ಬೇಸಿನ್ ಸಮಸ್ಯೆ: ಭದ್ರಾ ಜಲಾಶಯದ ಸ್ಟೀಲ್ ಬೇಸಿನ್ ಕಿತ್ತುಹೋದ ಪ್ರಕರಣ 2020ರಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಆ ಸಂದರ್ಭದಲ್ಲಿ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ತನಿಖೆಗೂ ಆದೇಶಿಸಿದ್ದರು. ಡ್ಯಾಂ ಪುನಶ್ಚೇತನ ಕಾಮಗಾರಿ ಭಾಗವಾಗಿ ಕೈಗೊಂಡಿದ್ದ ಸ್ಟೀಲ್ ಬೇಸಿನ್ ನಿರ್ಮಾಣ ಕಡಿಮೆ ಅವಧಿಯಲ್ಲಿ ಕಿತ್ತುಹೋಗಿರುವುದು ಆಕ್ರೋಶಕ್ಕೆ ಕಾರಣವಾಗಿತ್ತು. ಕಳೆದ ತಿಂಗಳು ವ್ಯಾಪಕ ಮಳೆ ಸಂದರ್ಭದಲ್ಲಿ ಮೂರ್ನಾಲ್ಕು ದಿನ ಸಾವಿರಾರು ಕ್ಯೂಸೆಕ್ ನೀರು ಸೋರಿಕೆಯಾಗಿರುವುದು ಆತಂಕ ಮೂಡಿಸಿತ್ತು.
ಪರಿಶೀಲನೆಗೆ ದಶಕ: ಅಣೆಕಟ್ಟು ಸುರಕ್ಷತಾ ಪರಿಶೀಲನಾ ಸಮಿತಿ ಪ್ರತಿ 5-10 ವರ್ಷಗಳಿಗೊಮ್ಮೆ ಎಲ್ಲ ಜಲಾಶಯಗಳಿಗೆ ಭೇಟಿ ನೀಡಿ ಅಣೆಕಟ್ಟೆ ಸಾಮರ್ಥ್ಯ, ತಾಂತ್ರಿಕ ಸಮಸ್ಯೆ, ನಿರ್ವಹಣೆ ಕುರಿತು ಪರಿಶೀಲಿಸುತ್ತದೆ. ಆ ಸಂದರ್ಭದಲ್ಲಿ ಅಗತ್ಯ ಸಲಹೆ-ಸೂಚನೆ ನೀಡುತ್ತದೆ. ಅದನ್ನು ಆಧರಿಸಿ ಜಲಾಶಯದ ದೃಢತೆ ಹೆಚ್ಚಿಸುವ ಕೆಲಸ ಮಾಡಲಾಗುತ್ತದೆ. ಈ ಸಮಿತಿ 2015ರಲ್ಲಿ ಜಿಲ್ಲೆಯ ಜಲಾಶಯಗಳ ಪರಿಶೀಲನೆ ನಡೆಸಿತ್ತು. ಸಾಮಾನ್ಯವಾಗಿ ಜಲಾಶಯಗಳ ನಿರ್ವಹಣೆಗೆ ಜಲಸಂಪನ್ಮೂಲ ಇಲಾಖೆಯಿಂದ ಗರಿಷ್ಠ ಒಂದು ಕೋಟಿ ರೂ. ಅನುದಾನ ಬರುತ್ತದೆ. ಇದರಲ್ಲಿ ಜಲಾಶಯದ ದೈನಂದಿನ ನಿರ್ವಹಣೆ ಮಾತ್ರ ಸಾಧ್ಯವಾಗುತ್ತದೆ. ತಾಂತ್ರಿಕವಾಗಿ ದೊಡ್ಡ ರಿಪೇರಿ ಸಾಧ್ಯವಾಗುವುದಿಲ್ಲ.
ಡಿಆರ್‌ಐಪಿ (ಡ್ಯಾಂ ರೀಹ್ಯಾಬಿಟೇಷನ್ ಇರಿಗೇಷನ್ ಪ್ರೋಗ್ರಾಂ) ಮೊದಲ ಹಂತದಲ್ಲಿ ಭದ್ರಾ ಜಲಾಶಯ ಪುನಶ್ಚೇತನಕ್ಕೆ ಅನುದಾನ ಲಭ್ಯವಾಗಿತ್ತು. ಇದೀಗ ಎರಡನೇ ಹಂತದಲ್ಲಿ ಹಣ ಬಿಡುಗಡೆ ಮಾಡುವಂತೆ ನಾಲ್ಕು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆಗೆ ಇನ್ನೂ ವಿಶ್ವ ಬ್ಯಾಂಕ್ ಕಡೆಯಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿಲ್ಲ ಎಂಬ ಮಾಹಿತಿಯಿದೆ. ಶೀಘ್ರವೇ ಈ ಸಂಬಂಧ ಮಹತ್ವದ ಸಭೆಯೊಂದು ಆಯೋಜನೆಯಾಗಿದೆ ಎಂದು ಇಂಜಿನಿಯರ್ ಮಾಹಿತಿ ನೀಡಿದರು.
ನಿರ್ವಹಣೆಗೆ ಪ್ರತ್ಯೇಕ ವಿಭಾಗ: ಜಿಲ್ಲೆಯಲ್ಲಿರುವ 12 ಜಲಾಶಯಗಳ ಪೈಕಿ ಕೆಪಿಸಿ ವ್ಯಾಪ್ತಿಯಲ್ಲಿ 7 ಡ್ಯಾಂಗಳಿವೆ. ಇವುಗಳ ನಿರ್ವಹಣೆಗೆ ಕೆಪಿಸಿಯಿಂದ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಅದೇ ರೀತಿ ಭದ್ರಾ ಹಾಗೂ ಲಿಂಗನಮಕ್ಕಿ ಜಲಾಶಯಗಳಲ್ಲೂ ತಂತ್ರಜ್ಞರ ತಂಡ ಆಯಾ ಜಲಾಶಯಗಳ ಮೇಲೆ ನಿಗಾ ವಹಿಸುತ್ತದೆ. ಈಗ ಹೊಸಪೇಟೆ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಪ್ರಕರಣ ಮುಂದಿಟ್ಟುಕೊಂಡು ಎಲ್ಲ ಡ್ಯಾಂಗಳ ಸಾಮರ್ಥ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸುವುದು ಉಚಿತವಲ್ಲ ಎಂಬುದು ನಿವೃತ್ತ ಇಂಜಿನಿಯರ್‌ವೊಬ್ಬರ ಅನಿಸಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net