ಬೈರನಬೆಟ್ಟದಲ್ಲಿ ನೀರಿನ ಯೋಜನೆ ಬೇಡ

hhr (1)
ಸಮೀಪದ ಡಾಣಾಯಕಪುರದ ಬೈರನಬೆಟ್ಟಕ್ಕೆ ಭದ್ರಾವತಿ ತಹಸೀಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಜಲಮಂಡಳಿ ಇಂಜಿನಿಯರ್‌ಗಳ ತಂಡ ಭೇಟಿ ನೀಡಿತ್ತು. ರವಿಕುಮಾರ್, ಚಂದ್ರಶೇಖರ್, ಪರಮೇಶ್ವರಪ್ಪ ಇತರರಿದ್ದರು.
Published on

ಹೊಳೆಹೊನ್ನೂರು: ಸಮೀಪದ ಬೈರನಬೆಟ್ಟದಲ್ಲಿ ಕುಡಿಯುವ ನೀರು ಸೇರಿ ಯಾವುದೇ ಯೋಜನೆಗಳನ್ನು ನಡೆಸಲು ಬಿಡುವುದಿಲ್ಲ ಎಂದು ಡಾಣಾಯಕಪುರದ ಗ್ರಾಮಸ್ಥರು ಜೆಸಿಬಿ ಯಂತ್ರಗಳನ್ನು ತಡೆದು ವಾಪಸ್ ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಗಳವಾರ ಭದ್ರಾವತಿ ತಹಸೀಲ್ದಾರ್ ಪರುಶುರಾಮ್ ನೇತೃತ್ವದಲ್ಲಿ ಜಲಮಂಡಳಿ ಇಂಜಿನಿಯರ್‌ಗಳ ತಂಡ ಬೆಟ್ಟಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿತು.

ಇಂಜಿನಿಯರ್ ರವಿಕುಮಾರ್ ಮಾತನಾಡಿ, ಗ್ರಾಮಸ್ಥರು ಸೂಚಿಸಿದ ಹಿಂಭಾಗದ ಬೆಟ್ಟವು ಬೈರನಬೆಟ್ಟಕ್ಕಿಂತ 6-8 ಮೀಟರ್ ಎತ್ತರ ಕಡಿಮೆ ಇದೆ. ಇದರಿಂದ ಹಿಂಭಾಗದ ಬೆಟ್ಟದಲ್ಲಿ ಕಾಮಗಾರಿ ನಡೆಸಿದರೆ ಯೋಜನೆ ಯಶಸ್ವಿಯಾಗುವುದು ಕಷ್ಟ ಎಂದರು.

ತಹಸೀಲ್ದಾರ್ ಪರುಶುರಾಮ್ ಮಾತನಾಡಿ, ಹಿಂಭಾಗದ ಗುಡ್ಡದ ಎತ್ತರವನ್ನು ವೈಜ್ಞಾನಿಕವಾಗಿ ಪರೀಕ್ಷಿಸದೆ ಎತ್ತರ ಸಾಲುವುದಿಲ್ಲ ಎನ್ನುವುದು ತಪ್ಪಾಗುತ್ತದೆ. ಆದಷ್ಟು ಬೇಗ ಗ್ರಾಮಸ್ಥರು ತಿಳಿಸಿದ ಗುಡ್ಡವನ್ನು ಪರಿಶೀಲಿಸಿ ವರದಿ ನೀಡುವಂತೆ ಇಂಜಿನಿಯರ್‌ಗೆ ತಿಳಿಸಿದರು. ಡಾಣಾಯಕಪುರದ ಬಳಿ ಬೈರನಬೆಟ್ಟ ಬಿಟ್ಟರೆ ಮತ್ಯಾವ ಗುಡ್ಡಗಳೂ ಕಾಮಗಾರಿಗೆ ಸೂಕ್ತವಿಲ್ಲ ಎಂದು ಇಂಜಿನಿಯರ್‌ಗಳ ತಂಡ ತಹಸೀಲ್ದಾರ್‌ಗೆ ನಕ್ಷೆ ಸೇರಿ ಕೆಲ ದಾಖಲೆಗಳನ್ನು ತೋರಿಸಿತು.

ಅಧಿಕಾರಿಗಳೊಂದಿಗೆ ಮಾತನಾಡಿದ ಗ್ರಾಮ ಮುಖಂಡರು, ಬೈರನಬೆಟ್ಟದಲ್ಲಿ ಕಾಮಗಾರಿ ನಡೆಸುವುದಾದರೆ ನಮ್ಮೂರಿಗೆ ಕುಡಿಯುವ ನೀರಿನ ಯೋಜನೆಯೇ ಬೇಡ ಎಂದು ತೀರ್ಮಾನ ಮಾಡಲಾಗಿದೆ. ಬೈರವೇಶ್ವರ ದೇವಸ್ಥಾನದ ಮೆಟ್ಟಿಲುಗಳ ಬಳಿ ಕಾಮಗಾರಿ ನಡೆಸಿದರೆ ದೇವಸ್ಥಾನವೇ ಮರೆಯಾಗುತ್ತದೆ. ಅಲ್ಲದೆ ಧಾರ್ಮಿಕ ಆಚರಣೆಗಳಿಗೆ ಸೂಕ್ತ ಜಾಗ ಇಲ್ಲದಂತಾಗುತ್ತದೆ. ಆದ್ದರಿಂದ ಬೈರನಬೆಟ್ಟದಲ್ಲಿ ಯೋಜನೆ ಬೇಡ. ಪಟ್ಟಣ ಸಮೀಪದ ಜಂಬರಘಟ್ಟೆಯಲ್ಲಿ ಬೈರನಬೆಟ್ಟಕ್ಕಿಂತ ಮೂರು ಪಟ್ಟು ಎತ್ತರದ ಗುಡ್ಡಗಳಿವೆ. ಅಲ್ಲಿ ಬೇಕಾದರೆ ಯೋಜನೆ ಅನುಷ್ಠಾನಗೊಳಿಸಿ ಎಂದು ಅಭಿಪ್ರಾಯ ಮಂಡಿಸಿದರು.

ಜಲಮಂಡಳಿ ಇಂಜಿನಿಯರ್ ರವಿಕುಮಾರ್ ಮಾತನಾಡಿ, ಹೊಳೆಹೊನ್ನೂರಿಂದ 4-5 ಕಿ.ಮೀ ದೂರದಲ್ಲಿರುವ ಜಂಬರಘಟ್ಟೆವರೆಗೆ ತುಂಗಭದ್ರಾ ನದಿ ನೀರು ಕಳಿಸಿ ಮತ್ತೆ ಅದೇ ನೀರನ್ನು ಹೊಳೆಹೊನ್ನೂರಿಗೆ ತರುವುದು ಪ್ರಯಾಸವಾಗುತ್ತದೆ. ಇನ್ನೆರಡು ದಿನದಲ್ಲಿ ಬೈರನಬೆಟ್ಟದ ಹಿಂಭಾಗದ ಗುಡ್ಡವನ್ನು ಪರಿಶೀಲಿಸಿ ಮಾಹಿತಿ ನೀಡಲಾಗುವುದು ಎಂದರು.

ಸರ್ಕಾರದ ಯಾವುದೇ ಯೋಜನೆಗಳನ್ನು ಬೈರನಬೆಟ್ಟದಲ್ಲಿ ಅನುಷ್ಠಾನ ಮಾಡಲು ಆಸ್ಪದ ನೀಡಬಾರದು ಎಂದು ಡಾಣಾಯಕಪುರ ಗ್ರಾಮ ಮುಖಂಡರು, ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಜಿಲ್ಲಾಢಳಿತಕ್ಕೆ ಮನವಿ ಸಲ್ಲಿಸಿದ್ದಾರೆ. ಉಪ ತಹಸೀಲ್ದಾರ್ ವಿಜಯ್, ರಾಜಸ್ವ ನಿರೀಕ್ಷ ರವಿಕುಮಾರ್, ಗ್ರಾಮ ಮುಖಂಡ ಪರಮೇಶ್ವರಪ್ಪ, ಪೈಲ್ವಾನ್ ಚಂದ್ರಪ್ಪ, ಚಂದ್ರಶೇಖರ್, ಡಿ.ಪಿ.ಹನುಂತಮಪ್ಪ, ಎಸ್.ಕುಮಾರ್, ಹೆಗ್ಡೇಶ, ಆಂಜನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net