

ಸೋಲ್: ಉತ್ತರ ಕೊರಿಯಾದ ಈ ಭೂಮಿಯ ಮೇಲೆ ಇನ್ನು ಯುದ್ಧದ ಮಾತೇ ಇಲ್ಲ. ನಮ್ಮ ದೇಶವು ಅತ್ಯಂತ ಸುರಕ್ಷಿತವಾಗಿದ್ದು, ಈ ದೇಶದ ಭವಿಷ್ಯವು ಅತ್ಯಂತ ಉಜ್ವಲವಾಗಿದೆ. ಇನ್ನು ಮುಂದೆ ಯುದ್ಧ ಎಂಬ ಶಬ್ದ ಬರುವುದೇ ಇಲ್ಲ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ಜಾಂಗ್ ಹೇಳಿದ್ದಾರೆ.
ಅಷ್ಟಕ್ಕೂ ಅವರು ಈ ವಿಷಯವನ್ನು ಪ್ರಸ್ತಾಪಿಸಿರಲು ಕಾರಣ, ಉತ್ತರ ಕೊರಿಯಾದಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳಿಂದಾಗಿ ಯಾವ ದೇಶಗಳೂ ಅವರ ಬಳಿ ಯುದ್ಧ ಸಾರಲು ಬರುವುದಿಲ್ಲ ಎಂದು. ‘ನಮ್ಮಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳು ದೇಶದ ಸುರಕ್ಷತೆ ಮತ್ತು ಭವಿಷ್ಯ ಕಾಪಾಡಲಿದೆ. ಹೀಗಾಗಿ ಯುದ್ಧದ ಮಾತೇ ಇಲ್ಲ, ನಾನು ಇರುವಲ್ಲಿ ಯುದ್ಧ ಸಾಧ್ಯವಿಲ್ಲ’ ಎಂದಿದ್ದಾರೆ.
ನಮ್ಮ ದೇಶವು ಬಾಹ್ಯ ಶಕ್ತಿಗಳ ವಿರುದ್ಧ ಗೆಲುವು ಸಾಧಿಸಲು ಅತ್ಯಂತ ಕಠಿಣ ಹಾಗೂ ಬಲಶಾಲಿಯಾಗಿರುವ ಪರಮಾಣ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಿದೆ.
ಆದ್ದರಿಂದ ಹೊರ ದೇಶಗಳು ನಮ್ಮ ಮೇಲೆ ಒತ್ತಡ ಹೇರಲು ಬಂದರೆ ಅಥವಾ ಯಾವುದೇ ರೀತಿಯ ಪ್ರತಿಕೂಲ ಶಕ್ತಿಗಳು ಎದುರಾಗದಂತೆ ಕಾಪಾಡುವ ಅಣ್ವಸ್ತ್ರಗಳು ನಮ್ಮಲ್ಲಿವೆ. ಎಂಥದ್ದೇ ಶಕ್ತಿಯನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ. ಆದ್ದರಿಂದ ಯಾರೂ ನಮ್ಮ ಭೂಮಿಯ ಮೇಲೆ ಯುದ್ಧ ಸಾರಲು ಬರುವುದೇ ಇಲ್ಲ ಎಂದು ಘಂಟಾಘೋಷವಾಗಿ ಕಿಮ್ ನುಡಿದಿದ್ದಾರೆ.
1950-53ರಲ್ಲಿ ನಡೆದಿರುವ ಕೊರಿಯಾ ಯುದ್ಧದ 67ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಯೋಧರನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ. ತಮ್ಮನ್ನು ಭಾಷಣದಲ್ಲಿ ಸಾಕಷ್ಟು ಹೊಗಳಿಕೊಂಡಿರುವ ಕಿಮ್. ತಮ್ಮಂಥ ನಾಯಕನಿಂದ ಇಷ್ಟು ಪ್ರಬಲವಾದ ಅಣ್ವಸ್ತ್ರ ತಯಾರಾಗಿರುವುದರಿಂದ ಯುದ್ಧದ ಭೀತಿ ನಮ್ಮ ದೇಶವಾಸಿಗಳಿಗೆ ಇಲ್ಲ ಎಂದಿದ್ದಾರೆ.