

ಶಿವಮೊಗ್ಗ: ಕಳೆದ ಎರಡು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ವೇತನ ಬಿಡುಗಡೆ ಆಗಿಲ್ಲ. ಸರ್ಕಾರದಿಂದ ಬಿಡುಗಡೆ ಆದರೂ ಜಂಟಿ ನಿರ್ದೇಶಕರು ಮತ್ತು ಪ್ರಾಚಾರ್ಯರು ತಡೆಹಿಡಿದಿರುವುದು ಅಕ್ಷಮ್ಯ. ತಕ್ಷಣವೇ ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಈ ಬಗ್ಗೆ ಗಮನ ಹರಿಸಿ ಜಂಟಿ ನಿರ್ದೇಶಕರು ಮತ್ತು ಪ್ರಾಚಾರ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ಆಗ್ರಹಿಸಿದರು.
ನೆಟ್, ಸ್ಲೆಟ್, ಡಾಕ್ಟರೇಟ್ ಪಡೆದಿದ್ದರೂ ಅತಿಥಿ ಉಪನ್ಯಾಸಕರ ಗೋಳಿಗೆ ಅಂತ್ಯವಿಲ್ಲ. ಪ್ರತಿ ವರ್ಷವೂ ಉದ್ಯೋಗ ಭದ್ರತೆ ಬಗ್ಗೆ ಆತಂಕ ಕಾಡುತ್ತಲೇ ಇದೆ. ಈಗಾಗಲೇ ಸರ್ಕಾರದ ಹಣ ನೀಡಿದೆ. ಆದರೆ ಜೆಡಿಗಳು ಮತ್ತು ಪ್ರಾಚಾರ್ಯರು ತಮ್ಮ ಬಳಿ ಇಟ್ಟುಕೊಂಡು ಕೂರುವ ಮೂಲಕ ಸಾವಿರಾರು ಅತಿಥಿ ಉಪನ್ಯಾಸಕರ ಬದುಕಿನ ಜತೆ ಆಟವಾಡುತ್ತಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಅತಿಥಿ ಉಪನ್ಯಾಸಕರಿಗೆ ಉದ್ಯೋಗದ ಭದ್ರತೆ ಇಲ್ಲವಾಗಿದೆ. ವೈದ್ಯಕೀಯ ಚಿಕಿತ್ಸೆಯ ಭಾಗ್ಯವೂ ಇಲ್ಲ. ಇಡೀ ಸಮೂಹ ಕಳವಳಕ್ಕೆ ಒಳಗಾಗಿದ್ದು ಉನ್ನತ ಶಿಕ್ಷಣ ಸಚಿವರು ತಕ್ಷಣ ಸಮಸ್ಯೆ ಬಗೆಹರಿಸಬೇಕು. ಈಗಾಗಲೇ ತರಗತಿ ಶುರುವಾಗಿರುವ ಕಾರಣ ಅನಗತ್ಯ ವಿಳಂಬ ಮಾಡದೇ ಕ್ರಮ ಕೈಗೊಳ್ಳಬೇಕು. ಪೂರ್ಣ ಪ್ರಮಾಣದಲ್ಲಿ ಅತಿಥಿ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡಬೇಕು. ಅತಿಥಿ ಉಪನ್ಯಾಕರ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದು ಅದರಂತೆ ನಡೆದುಕೊಳ್ಳಬೇಕಿದೆ. ಜಂಟಿ ನಿರ್ದೇಶಕರು ಮತ್ತು ಪ್ರಾಚಾರ್ಯರು ಅತಿಥಿ ಉಪನ್ಯಾಸಕರನ್ನು ಎರಡನೇ ದರ್ಜೆ ನೌಕರರಂತೆ ನೋಡುತ್ತಿದ್ದು ವಿನಾಕಾರಣ ವೇತನ ತಡೆಹಿದಿರುವ ಜೆಡಿಗಳು ಮತ್ತು ಪ್ರಾಚಾರ್ಯರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ವೈ.ಎಚ್.ನಾಗರಾಜ್, ಶಿ.ಜು.ಪಾಶ, ಈರಣಯ್ಯ ಸುದ್ದಿಗೋಷ್ಠಿಯಲ್ಲಿದ್ದರು.