

ಮುಂಬೈ: ಈ ವರ್ಷ ಐಪಿಎಲ್ ನಡೆಯದಿದ್ದರೆ ಫ್ರಾಂಚೈಸಿ ಮಾಲೀಕರು ಆಟಗಾರರಿಗೆ ಸಂಭಾವನೆ ಪಾವತಿ ಮಾಡುವುದಿಲ್ಲ. ಐಪಿಎಲ್ ವೇತನ ಪಾವತಿ ಪದ್ಧತಿಯ ಅನ್ವಯ, ಟೂರ್ನಿ ಆರಂಭಕ್ಕೆ ಒಂದು ವಾರ ಮುನ್ನ ಎಲ್ಲ ಆಟಗಾರರಿಗೆ ಶೇ. 15ರಷ್ಟು ಸಂಭಾವನೆ ಪಾವತಿಸಬೇಕು.
ಬಳಿಕ ಟೂರ್ನಿಯ ವೇಳೆ ಶೇ. 65ರಷ್ಟು ಸಂಭಾವನೆ ನೀಡಬೇಕು. ಉಳಿದ ಶೇ. 20ರಷ್ಟು ಸಂಭಾವನೆಯನ್ನು ಟೂರ್ನಿ ಮುಗಿದ ಬಳಿಕ ನಿರ್ದಿಷ್ಟ ದಿನಾಂಕದೊಳಗೆ ಪಾವತಿಸಬೇಕು ಎಂದು ಫಾಂಚೈಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವರ್ಷ ಐಪಿಎಲ್ ನಡೆಯದಿದ್ದರೆ ಬಿಸಿಸಿಐ ಮತ್ತು ಆಟಗಾರರು ಭಾರಿ ನಷ್ಟ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಕ್ರಿಕೆಟಿಗರ ಸಂಸ್ಥೆ (ಐಸಿಎ) ಅಧ್ಯಕ್ಷ ಅಶೋಕ್ ಮಲ್ಹೋತ್ರಾ ತಿಳಿಸಿದ್ದಾರೆ.
ಐಪಿಎಲ್ ನಡೆಯದೆ ಮಂಡಳಿಗೆ ನಷ್ಟವಾದರೆ ಆಗ ದೇಶೀಯ ಕ್ರಿಕೆಟಿಗರೂ ಅದರ ಹೊರೆಯನ್ನು ಇಳಿಸ ಬೇಕಾಗುತ್ತದೆ. ಹೀಗಾಗಿ ಅವರಿಗೂ ವೇತನ ಕಡಿತವಾಗಬಹುದು ಎಂದು ಹೇಳಿದ್ದಾರೆ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ಕ್ರಿಕೆಟಿಗರು ಈಗಾಗಲೆ ವೇತನ ಕಡಿತಕ್ಕೆಸಿದ್ಧವಿರುವುದಾಗಿ ತಿಳಿಸಿದ್ದಾರೆ. ‘ಐಪಿಎಲ್ ನಡೆಯದಿದ್ದರೆ, ದುಬಾರಿ ಸಂಭಾವನೆ ಪಡೆಯುವ ಧೋನಿ, ಕೊಹ್ಲಿ ಅವರಂಥ ಸ್ಟಾರ್ ಆಟಗಾರರಿಗೆ ದೊಡ್ಡ ನಷ್ಟವಾಗು ತ್ತದೆ. ಇದರೊಂದಿಗೆ ಇದೇ ಮೊದಲ ಬಾರಿಗೆ ಐಪಿಎಲ್ ಆಡುವ ಆಟಗಾರರು 20, 40, 60 ಲಕ್ಷ ರೂ. ಪಡೆಯುವವರಿದ್ದರೆ, ಅವರಿಗೆ ಅದು ಜೀವನವನ್ನೇ ಬದಲಾಯಿಸಬಲ್ಲ ಮೊತ್ತವಾಗಿರುತ್ತದೆ. ಇದನ್ನು ಅವರು ನಿಭಾಯಿಸುವುದು ಕಷ್ಟ’ ಎಂದು ಮಲ್ಹೋತ್ರಾ ತಿಳಿಸಿದ್ದಾರೆ. ಈ ವರ್ಷ ಐಪಿಎಲ್ ನಡೆಯದಿದ್ದರೆ ಬಿಸಿಸಿಐ ಸುಮಾರು 3 ಸಾವಿರ ಕೋಟಿ ರೂ. ನಷ್ಟ ಎದುರಿಸಬೇಕಾಗುತ್ತದೆ.
ಕ್ರಿಕೆಟ್ ಪಂದ್ಯಗಳಿಂದ ಬಿಸಿಸಿಐ ಹಣ ಗಳಿಸುತ್ತದೆ. ಕ್ರಿಕೆಟ್ ನಡೆಯದಿದ್ದರೆ ಅದಕ್ಕೆ ಎಲ್ಲಿಂದ ಹಣ ಬರಬೇಕು. ಈ ಸೂಕ್ಷ್ಮತೆಯನ್ನು ಅರ್ಥಮಾಡಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟಿಗರ ಜತೆಗೆ ದೇಶೀಯ ಕ್ರಿಕೆಟಿಗರೂ ವೇತನ ಕಡಿತಕ್ಕೆ ಸಮ್ಮತಿಸಬೇಕಿದೆ. | ಅಶೋಕ್ ಮಲ್ಹೋತ್ರಾ ಐಸಿಎ ಅಧ್ಯಕ್ಷ