

ಕೇರಳ: ಧಾರಕಾರ ಮಳೆಗೆ ವಯನಾಡಿನಲ್ಲಿ ಭಾರೀ ಭೂಕುಸಿತ ಉಂಟಾಗಿದ್ದು, ಇದೀಗ ಮೃತಪಟ್ಟವರ ಸಂಖ್ಯೆ 285ಕ್ಕೆ ಏರಿಕೆಯಾಗಿದೆ. ಇಲ್ಲಿಯವರೆಗೆ 1000 ಮಂದಿಯನ್ನು ರಕ್ಷಣಾ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರತೆಗೆಯಲಾಗಿದ್ದು, ಮಣ್ಣಿನಡಿ ಸಿಲುಕಿರುವ ನೂರಾರು ಜನರನ್ನು ಹೊರತರಲು ರಕ್ಷಣಾ ಪಡೆ ಹರಸಾಹಸ ಪಡುತ್ತಿದೆ. ಸದ್ಯ ಕಾರ್ಯಾಚರಣೆಗೆ ಭಾರತೀಯ ಸೇನೆ ಕೈಜೋಡಿಸಿರುವುದು ಮತ್ತಷ್ಟು ಬಲ ನೀಡಿದೆ. ಒಂದೇ ಕುಟುಂಬದ ಹಲವರು ದುರಂತ ಸಾವು ಕಂಡಿದ್ದು, ತಮ್ಮವರನ್ನು ಕಳೆದುಕೊಂಡವರ ಆಕ್ರಂದನ ಮುಗಿಲು ಮುಟ್ಟಿದೆ.
ಇನ್ನು ಈ ಮಧ್ಯೆ ಸಂಸತ್ತಿನಲ್ಲಿ ವಯನಾಡಿನಲ್ಲಿ ನಡೆದ ಭೂದುರಂತದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕೇರಳದಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಮುನ್ಸೂಚನೆಯನ್ನು ಕೇಂದ್ರ ಸರ್ಕಾರವು ನೀಡಿತ್ತು. ಭೂಕುಸಿತ ಹಿನ್ನೆಲೆ ಮುಂಚಿತವಾಗಿಯೇ ರೆಡ್ ಅಲರ್ಟ್ ಘೋಷಿಸಲಾಗಿತ್ತು ಎಂದರು. ಇದೀಗ ಗೃಹಸಚಿವರ ಹೇಳಿಕೆಗೆ ತಿರುಗೇಟು ನೀಡಿರುವ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಯಾವ ರೆಡ್ ಅಲರ್ಟ್ ಸೂಚನೆಯನ್ನು ಕೂಡ ಕೇಂದ್ರ ಕೊಟ್ಟಿರಲಿಲ್ಲ, ಕೊಟ್ಟಿಲ್ಲ ಎಂದು ಹೇಳಿದರು.
ವಯನಾಡು ಜಿಲ್ಲೆಯಲ್ಲಿ ಭೂಕುಸಿತದಿಂದ 150-200ಕ್ಕೂ ಹೆಚ್ಚು ಸಾವುಗಳು ಸಂಭವಿಸುವ ಬಗ್ಗೆ ಕೇರಳ ಸರ್ಕಾರಕ್ಕೆ ಮುನ್ನೆಚ್ಚರಿಕೆ ನೀಡಲಾಗಿತ್ತು ಎಂದು ಅಮಿತ್ ಷಾ ನೀಡಿದ ಹೇಳಿಕೆಯ ಬೆನ್ನಲ್ಲೇ ಇದೀಗ ವೀಣಾ ಅವರು ಸ್ಪಷ್ಟನೆ ನೀಡಿದ್ದಾರೆ. "ಕೇಂದ್ರ ಗೃಹಸಚಿವರು ಇಂತಹ ತಪ್ಪುದಾರಿಗೆಳೆಯುವ ಹೇಳಿಕೆ ನೀಡಿರುವುದು ದುರಾದೃಷ್ಟಕರ. ಕೇಂದ್ರದಿಂದ ಬಂದಂತಹ ಎಲ್ಲಾ ಸಂವಹನಗಳನ್ನು ನಾವು ಸರಿಯಾಗಿ ಪರಿಶೀಲಿಸಿದ್ದೇವೆ. ಭೂಕುಸಿತದ ಬಗ್ಗೆ ಯಾವುದೇ ರೆಡ್ ಅಲರ್ಟ್ ನೀಡಲಾಗಿಲ್ಲ. ಆರೆಂಜ್ ಅಲರ್ಟ್ ಆಧರಿಸಿ ಜಿಲ್ಲಾಡಳಿತ ಕಾರ್ಯನಿರ್ವಹಿಸಿದ್ದು, ತೀವ್ರತೆ ಕಡಿಮೆಯಾಗಿದೆ" ಎಂದು ಜಾರ್ಜ್ ಸ್ಪಷ್ಟಪಡಿಸಿದ್ದಾರೆ,(ಏಜೆನ್ಸೀಸ್).