

ನವದೆಹಲಿ: ವೀರ ಸಾವರ್ಕರ್ ಅವರು ಬ್ರಿಟಿಷ್ ಆಡಳಿತಕ್ಕೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿರುವ ದಯಾ ಅರ್ಜಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಇಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿಗೆ ತಿಳಿಸಿದೆ.
ಹಿಂದು ರಾಷ್ಟ್ರೀಯ ನಾಯಕ ವಿನಾಯಕ ದಾಮೋದರ ಸಾವರ್ಕರ್ ಅವರು ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದ ದಯಾ ಅರ್ಜಿಯನ್ನು ಅಂಡಮಾನ್- ನಿಕೋಬಾರ್ ಸೆಲ್ಯುಲರ್ ಜೈಲ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇರಿಸಿಲ್ಲ. ಅಂತಹ ಯಾವುದೇ ದಾಖಲೆಗಳು ಕಲೆ ಮತ್ತು ಸಂಸ್ಕೃತಿ ಇಲಾಖೆಯ ಬಳಿ ಇಲ್ಲ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ರಾಜ್ಯ ಸಭೆ ಸದಸ್ಯರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ್ದಾರೆ.
ಅಂಡಮಾನ್-ನಿಕೋಬಾರ್ನ ಕಲೆ ಮತ್ತು ಸಂಸ್ಕೃತಿ ನಿರ್ದೇಶನಾಲಯದಿಂದ ಪಡೆದ ಮಾಹಿತಿ ಪ್ರಕಾರ, ಅಂತಹ ಯಾವುದೇ ದಯಾ ಅರ್ಜಿಯನ್ನು ಅಲ್ಲಿ ಪ್ರದರ್ಶನಕ್ಕೆ ಇರಿಸಿಲ್ಲ. ಅಲ್ಲದೆ, ಇದುವರೆಗೆ ಲಭ್ಯ ದಾಖಲೆಗಳಲ್ಲಿ ಆ ರೀತಿಯ ದಯಾ ಅರ್ಜಿಯ ದಾಖಲೆಗಳು ಇಲ್ಲ ಎಂದು ಅಂಡಮಾನ್ -ನಿಕೋಬಾರ್ ಆಡಳಿತವೂ ಸ್ಪಷ್ಟಪಡಿಸಿರುವುದಾಗಿ ಅವರು ತಿಳಿಸಿದ್ದಾರೆ. (ಏಜೆನ್ಸೀಸ್)