ಭ್ರಷ್ಟಾಚಾರ ಸಹಿಸುವ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಹೇಳಿಕೆ

1. ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕ  ಹಮ್ಮಿಕೊಂಡಿದ್ದ ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನವನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್, ಡಾ.ಎಂ.ಆರ್.ಹುಲಿನಾಯ್ಕರ್, ಪ್ರಕಾಶ್, ಅಂಬಿಕಾ ಹುಲಿನಾಯ್ಕರ್ ಮತ್ತಿತರರು ಇದ್ದರು.
1. ತುಮಕೂರಿನ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನವನ್ನು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಉದ್ಘಾಟಿಸಿದರು. ಜಿ.ಬಿ.ಜ್ಯೋತಿಗಣೇಶ್, ಡಾ.ಎಂ.ಆರ್.ಹುಲಿನಾಯ್ಕರ್, ಪ್ರಕಾಶ್, ಅಂಬಿಕಾ ಹುಲಿನಾಯ್ಕರ್ ಮತ್ತಿತರರು ಇದ್ದರು.
Published on

ತುಮಕೂರು; ಭ್ರಷ್ಟಾಚಾರವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಇತ್ತೀಚಿನ ಶಾಸಕರ ಲಂಚ ಪ್ರಕರಣದಲ್ಲೂ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಖಾತಾ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು.

ನಗರದ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಬಿಜೆಪಿ ಪ್ರಣಾಳಿಕೆ ಸಲಹಾ ಅಭಿಯಾನದ ಸಂವಾದದಲ್ಲಿ ಮಾತನಾಡಿದ ಅವರು, 2014ಕ್ಕೂ ಮುನ್ನ ದೇಶದಲ್ಲಿ ಅರಾಜಕತೆ, ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ಅಭಿವೃದ್ಧಿಯ ಪರ್ವ ಆರಂಭವಾಯಿತು. ಜಿ-20 ಅಧ್ಯಕ್ಷತೆಯ ಗೌರವ ಸ್ಥಾನದ ಮೂಲಕ ಭಾರತ ವಿಶ್ವ ಗುರುವೆನಿಸಿಕೊಳ್ಳುವಂತಾಗಿದೆ ಎಂದರು.

ಮತ್ತೆ ಅಧಿಕಾರಕ್ಕೆ ತರುವ ಅವಶ್ಯ: ಪ್ರಗತಿಯ ಸ್ಥಿರತೆಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವುದು ಅತ್ಯವಶ್ಯ. ಈ ನಿಟ್ಟಿನಲ್ಲಿ ಕೇಂದ್ರ, ರಾಜ್ಯದ ಡಬಲ್ ಇಂಜಿನ್ ಸರ್ಕಾರಗಳ ಯೋಜನೆಗಳನ್ನು ಆಧರಿಸಿ ಮತದಾರರ ಬಳಿಗೆ ಮತ್ತೊಮ್ಮೆ ಹೋಗಬೇಕಿದೆ ಎಂದು ಮೀನಾಕ್ಷಿ ಲೇಖಿ ತಿಳಿಸಿದರು.

ಇದೇ ವೇಳೆ ವೈದ್ಯರು, ಇಂಜಿನಿಯರ್, ವಕೀಲರು, ನಿವೃತ್ತರೊಂದಿಗೂ ಸಂವಾದ ನಡೆಸಿದ ಸಚಿವೆ ಲೇಖಿ ಅವರು ಪ್ರಣಾಳಿಕೆಯನ್ನು ಸಿದ್ಧಪಡಿಸಲು ಎಲ್ಲ ವರ್ಗದವರಿಂದ ಸಲಹೆ, ಅಭಿಪ್ರಾಯ ಸ್ವೀಕರಿಸಿ ಉತ್ತಮ ಆಡಳಿತ ನೀಡಲು ಈ ಪ್ರಣಾಳಿಕೆ ಸಲಹಾ ಅಭಿಯಾನ ನಡೆಸಲಾಗುತ್ತಿದೆ ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಎಂ. ಆರ್. ಹುಲಿನಾಯ್ಕರ್, ಪ್ರಣಾಳಿಕೆ ಸಲಹಾ ಅಭಿಯಾನದ ಕೋ ಆರ್ಡಿನೇಟರ್ ಡಾ. ಪ್ರಕಾಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಂಬಿಕಾ ಹುಲಿನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.

ಸ್ಮಾರ್ಟ್ ವಿಲೇಜ್ ನಿರ್ಮಾಣಕ್ಕೆ ಒತ್ತು ಕೊಡಿ: ಕೇಂದ್ರದ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಫಗ್ಗನ್‌ಸಿಂಗ್ ಕುಲಸ್ತೆ ಅವರು ಗ್ರಾಮೀಣಾಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣ ಹಾಗೂ ಕೃಷಿ ಕ್ಷೇತ್ರದ ಪರಿಣಿತರೊಂದಿಗೆ ಸಂಜೆ ನಗರದ ಖಾಸಗಿ ಹೋಟೆಲ್‌ನಲ್ಲಿ ಸಂವಾದ ನಡೆಸಿದರು. ಈ ವೇಳೆ ಕೇಂದ್ರ ಸರ್ಕಾರವು ಗ್ರಾಮೀಣಾಭಿವೃದ್ಧಿಗೆ ಕೊಟ್ಟಿರುವ ಹತ್ತಾರು ಯೋಜನೆಗಳ ಮಾಹಿತಿ ಹಂಚಿಕೊಂಡ ಸಚಿವರು, ಇಂದಿರಾ ಅವಾಸ್ ಯೋಜನೆ ಅಡಿ ವಸತಿ ನಿರ್ಮಾಣ ಹೆಚ್ಚಳದ ಜತೆಗೆ ವಸತಿ ನಿರ್ಮಿಸಲು ಅನುದಾನವನ್ನು ಕೂಡ ಹೆಚ್ಚಳ ಮಾಡಲಾಗಿದೆ. ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿ ಗ್ರಾಮೀಣ ರಸ್ತೆ ಅಭಿವೃದ್ಧಿಗಳ ಹೆಚ್ಚಿನ ಆದ್ಯತೆ ಕೊಡಲಾಗಿದೆ ಎಂದರು.

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಹೆಚ್ಚು ಪಾರದರ್ಶಕತೆಗೊಳಿಸಲಾಗಿದೆ. ಅಂಗನವಾಡಿ ನಿರ್ಮಾಣದಿಂದ ಹಿಡಿದು ಹೊಲ,ಗದ್ದೆ ಬದುನಿರ್ಮಾಣ, ಶಾಲಾ ಕಾಂಪೌಂಡ್ ನಿರ್ಮಾಣ ಹೀಗೆ ಗ್ರಾಮೀಣಭಾಗದ ಜನರಿಗೆ ಉದ್ಯೋಗ ಸೃಜಿಸುವ ಮೂಲಕ ಯೋಜನೆ ಅಡಿ ಗ್ರಾಮೀಣರ ಬದುಕು ಹಸನುಗೊಳಿಸಲಾಗಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸಂವಾದದಲ್ಲಿ ಒಬಿಸಿ ಮೋರ್ಚಾದ ಎಸ್.ಪಿ.ಚಿದಾನಂದ್ ಸ್ಮಾರ್ಟ್‌ಸಿಟಿ ನಿರ್ಮಾಣದಂತೆ ಸ್ಮಾರ್ಟ್ ವಿಲೇಜ್ ನಿರ್ಮಾಣಕ್ಕೆ ಒತ್ತುಕೊಡಬೇಕು. ಇದನ್ನು ಪ್ರಣಾಳಿಕೆಯಲ್ಲಿ ಸೇರಿಸುವಂತೆ ಒತ್ತಾಯಿಸಿದರು. ಕೊಬ್ಬರಿ, ಅಡಕೆ ಬೆಳೆಗಳ ಬೆಲೆಯ ಸ್ಥಿರತೆಗೆ ಕ್ರಮವಹಿಸಬೇಕು. ಕನಿಷ್ಠ ಬೆಲೆಗೆ ಕುಸಿಯದಂತೆ ಬೆಲೆಸ್ಥಿರತೆ ಕಾಯ್ದುಕೊಳ್ಳಲು ಸರ್ಕಾರ ಸೂಕ್ತಕ್ರಮವಹಿಸಿ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ ಕುಮಾರ್ ಮನವಿ ಮಾಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಎಸ್.ರವಿಶಂಕರ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಡಾ.ಎಂ. ಆರ್. ಹುಲಿನಾಯ್ಕರ್, ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಸಂಪಿಗೆ ಶ್ರೀಧರ್, ಎಚ್.ಟಿ.ಭೈರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net