

ಬೆಂಗಳೂರು: ಶಿವರಾಮೇಗೌಡ- ದೇವರಾಜೇಗೌಡ ಆಡಿಯೋ ಬಗ್ಗೆ ತನಿಖೆ ನಡೆಸಬೇಕೇ ಬೇಡವೇ ಎಂದು ಎಸ್‌ಐಟಿ ನಿರ್ಧಾರ ಮಾಡಲಿದೆ. ಎಸ್‌ಐಟಿಗೆ ಸರ್ಕಾರ ಫ್ರೀ ಹ್ಯಾಂಡ್ ಕೊಟ್ಟಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ನಾವು ಯಾರೊಬ್ಬರ ಪೋನ್ ಸಹ ಟ್ಯಾಪಿಂಗ್ ಮಾಡಿಲ್ಲ. ಒಂದು ವೇಳೆ ೆನ್ ಕದ್ದಾಲಿಕೆ ಮಾಡಿದ ಬಗ್ಗೆ ನಿಖರವಾದ ಮಾಹಿತಿ ಇದ್ದರೆ ಕೊಡಲಿ. ಯಾರ ಪೋನ್ ಟ್ಯಾಪಿಂಗ್ ಮಾಡಲಾಗಿದೆ ಎಂದು ತನಿಖೆ ಮಾಡುತ್ತೇವೆ ಎಂದರು.
ನಾವು ಅವರಿಗೆ ಹಾಗೆಮಾಡಿ, ಹೀಗೆ ಮಾಡಿ ಎಂದು ಎಸ್‌ಐಟಿಗೆ ಹೇಳಲ್ಲ. ಸರ್ಕಾರಕ್ಕೆ ಬಹಳ ಕೆಲಸ ಇದೆ. ಇಷ್ಟು ದಿನ ಬರಗಾಲ ಇತ್ತು ನೀರು, ಮೇವು ಕೋಡಬೇಕಿತ್ತು. ಈಡಿ ದೇಶವೇ ರಾಜ್ಯವನ್ನು ಗಮನಿಸುತ್ತಾ ಇರುತ್ತದೆ ಎಂದು ತಿಳಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಕುರಿತಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ವಾರೆಂಟ್ ಆಧಾರದ ಮೇಲೆ ಎಸ್‌ಐಟಿ ಪತ್ರ ಬರೆದಿದ್ದಾರೆ. ಹೀಗಾಗಿ ತಕ್ಷಣ ಪಾಸಪೋರ್ಟ್ ರದ್ದು ಮಾಡಬೇಕಾಗುತ್ತದೆ. ಪಾಸ್‌ಪೋರ್ಟ್ ರದ್ದು ಮಾಡುವ ಅಧಿಕಾರ ಇದೆ. ಇದಕ್ಕೆ ಕೇಂದ್ರ ಸರ್ಕಾರ ಸ್ಪಂದನೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಎಚ್.ಡಿ.ಕುಮಾರಸ್ವಾಮಿ ಹೇಳಿದಂತೆ ಸಂಸದ ಪ್ರಜ್ವಲ್ ವಿದೇಶದಿಂದ ವಾಪಸಾಗಿ ವಿಚಾರಣೆ ಎದುರಿಸಲಿ. ತನಿಖೆಗೆ ಸಹಕಾರ ಮಾಡಲಿ, ನಂತರ ನೋಡೋಣ ಎಂದರು.
ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಸರ್ಕಾರ ವಿಫಲವಾಗಿದೆ, ರಾಜ್ಯಪಾಲರು ಸರ್ಕಾರವನ್ನು ವಜಾ ಮಾಡಬೇಕೆಂಬ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಒಂದು ವರ್ಷದಲ್ಲಿ ಸರ್ಕಾರ ಅನೇಕ ಸಾಧನೆ ಮಾಡಿದೆ. ಅಭಿವೃದ್ಧಿ, ನೀರಾವರಿ ಕೆಲಸಗಳು ನಿಂತಿಲ್ಲ, ಎಲ್ಲಿ ವಿಫಲರಾಗಿದ್ದೀವಿ ಅಂತ ಬಿಜೆಪಿಯವರು ಹೇಳಲಿ. ಪ್ರತಿಪಕ್ಷವಾಗಿ ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದು ತಿಳಿಸಿದರು.