

Karur Stampede: ಇತ್ತೀಚೆಗೆ ತಮಿಳುನಾಡಿನ ಕರೂರಿನಲ್ಲಿ ನಟ, ಟಿವಿಕೆ ಮುಖ್ಯಸ್ಥ ವಿಜಯ್ ನೇತೃತ್ವದಲ್ಲಿ ನಡೆದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸಂಸದರ ನಿಯೋಗದ ಬಿಜೆಪಿ ಸತ್ಯಶೋಧನಾ ಸಮಿತಿಯನ್ನು ಕಳುಹಿಸಿದ್ದಕ್ಕೆ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೆಂಡ ಕಾರಿದ್ದಾರೆ.
ಬಿಜೆಪಿ ಆಳ್ವಿಕೆಯ ಮಣಿಪುರದಲ್ಲಿ 2023 ರ ಮೇನಲ್ಲಿ ನಡೆದ ಜನಾಂಗೀಯ ಹಿಂಸಾಚಾರ ಅಥವಾ ಜನವರಿಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಮಹಾ ಕುಂಭ ಮೇಳದ ಸಮಯದಲ್ಲಿ ನಡೆದ ಕಾಲ್ತುಳಿತದ ಬಳಿಕ ಯಾವುದೇ ಸಮಿತಿಯನ್ನು ಕಳುಹಿಸಿರಲಿಲ್ಲ, ನಿಯೋಗ ಕಳುಹಿಸಿರುವುದಕ್ಕೆ ಯಾವುದೇ ಜನಪರ ಕಾಳಜಿ ಇಲ್ಲ ಮುಂದಿನ ವರ್ಷ ತಮಿಳುನಾಡು ಚುನಾವಣೆ ಇರುವುದರಿಂದ ಬಿಜೆಪಿ ರಾಜಕೀಯ ಲಾಭ ಪಡೆಯಲು ಈ ರೀತಿಯ ಪ್ರಯತ್ನ ನಡೆಸುತ್ತಿದೆ ಎಂದರು.
ಮಧುರೈನಲ್ಲಿ ಜನಿಸಿರುವ ಮತ್ತು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಫೆಡರಲ್ ಸರ್ಕಾರದ 'ಪ್ರತಿನಿಧಿ'ಯಾಗಿ ಕರೂರಿಗೆ ಕಳುಹಿಸಿದ್ದನ್ನೂ ಸಿಎಂ ಸ್ಟಾಲಿನ್ ಟೀಕಿಸಿದ್ದಾರೆ.
ಬಿಜೆಪಿ ಟೀಕೆ..
ಕರೂರ್ನಲ್ಲಿ ನಡೆದ ಟಿವಿಕೆ ಕಾರ್ಯಕ್ರಮಕ್ಕೆ ಚಿಕ್ಕ ರಸ್ತೆಗೆ ಅನುಮತಿ ನೀಡಿದ್ದೆ ಕಾರಣ ಎಂದಿರುವ ಸಂಸದೆ ಹೇಮಾ ಮಾಲಿನಿ, ದೊಡ್ಡ ನಟನಿಗೆ ಕಿರಿದಾದ ರಸ್ತೆ ನೀಡಿದ್ದು ಸರಿಯಲ್ಲ, ಅನೇಕ ಮಹಿಳೆಯರು ಮತ್ತು ಯುವತಿಯರು ವಿಜಯ್ರನ್ನು ನೋಡಲು ಬಂದಿದ್ದರು. ಟಿವಿಕೆ ಕೋರಿಕೆಯಂತೆ ಕಾರ್ಯಕ್ರಮಕ್ಕೆ ದೊಡ್ಡ ಜಾಗವನ್ನು ಮಂಜೂರು ಮಾಡಿದ್ದರೆ, ಈ ದುರಂತ ಸಂಭವಿಸುತ್ತಿರಲಿಲ್ಲ ಎಂದರು.
ಟಿವಿಕೆ ನಿರ್ಲಕ್ಷವೇ ಕಾರಣ..
ಪೊಲೀಸರು ನೀಡಿದ ಎಚ್ಚರಿಕೆಗಳ ಬಗ್ಗೆ ಟಿವಿಕೆ ಗಮನವನ್ನೆ ನೀಡಲಿಲ್ಲ ಎಂದು ಡಿಎಂಕೆ ಆರೋಪಿಸಿದೆ, ಜನಸಂದಣಿಯ ಕುರಿತಾಗಿ ಕಾರ್ಯಕ್ರಮ ಆಯೋಜಕರಿಗೆ ಅಧಿಕಾರಿಗಳು ನೀಡಿದ ಎಚ್ಚರಿಕೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ತಮಿಳುನಾಡು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಟಿವಿಕೆ, ಚುನಾವಣೆಗೆ ಮುನ್ನವೇ ಡಿಎಂಕೆ ಸರ್ಕಾರ ಪಿತೂರಿ ನಡೆಸಿದೆ ಆರೋಪ ಮಾಡಿದೆ. ಕಾಲ್ತುಳಿತದ ಬಳಿಕ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದ ನಟ ವಿಜಯ್, ಇದಕ್ಕೆ ಸ್ಟಾಲಿನ್ ಸೇಡಿನ ನೀತಿ ಕಾರಣ ಎಂದಿದ್ದರು.
ಸಂತ್ರಸ್ತರಿಗೆ ನೆರವಾಗಿ ಎಂದ ಕಾಂಗ್ರೆಸ್ ಸಂಸದೆ..
ಡಿಎಂಕೆ ಮಿತ್ರಪಕ್ಷ ಕಾಂಗ್ರೆಸ್ನ ಕರೂರು ಲೋಕಸಭಾ ಸದಸ್ಯೆ ಎಸ್. ಜೋತಿಮಣಿ ಗಾಯಾಳುಗಳು ಮತ್ತು ಮೃತರ ಕುಟುಂಬಗಳಿಗೆ ಸಹಾಯ ಮಾಡುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಹೇಳಿದರು. ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಟಿವಿಕೆ ಮದ್ರಾಸ್ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದು, ಘಟನೆಯ ಕುರಿತಾಗಿ ಸಮಗ್ರ ತನಿಖೆ ನಡೆಸುವಂತೆ ಮತ್ತು ಮೃತರ ಕುಟುಂಬಗಳನ್ನು ಭೇಟಿ ಮಾಡುವುದರಿಂದ ವಿಜಯ್‌ಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ನಿರ್ದೇಶನಗಳನ್ನು ಕೋರಿದೆ.(ಏಜೆನ್ಸೀಸ್)