

ಕೆ.ಎಂ.ದೊಡ್ಡಿ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಯಾರ ಮುಲಾಜಿಗೂ ಬಗ್ಗುವುದಿಲ್ಲ, ವಿರೋಧಿಗಳ ಟೀಕೆಗಳಿಗೆ ಹೆದರುವುದಿಲ್ಲ. ನನ್ನ ಕ್ಷೇತ್ರದ ಜನರ ಸೇವೆಯೇ ನನಗೆ ಮುಖ್ಯ ಎಂದು ಶಾಸಕ ಕದಲೂರು ಉದಯ್ ತಿಳಿಸಿದರು.
ಕಾವೇರಿ ನೀರಾವರಿ ನಿಗಮದ ಕಚೇರಿ ಆವರಣದಲ್ಲಿ ಬಹುಮಡಿ ಕಟ್ಟಡ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರೆವೇರಿಸಿ ಮಾತನಾಡಿದ ಅವರು, ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟು ಮಾದರಿ ಕ್ಷೇತ್ರ ಮಾಡುವ ಗುರಿಯನ್ನು ಹೊಂದಿರುವ ನಾನು ಕ್ಷೇತ್ರದ ಅಭಿವೃದ್ಧಿಯ ವಿಚಾರದಲ್ಲಿ ಯಾವುದೇ ಮುಲಾಜಿಗೂ ಒಳಗಾಗದೆ ಟೀಕೆಗಳಿಗೆ ಸೊಪ್ಪು ಹಾಕುವುದಿಲ್ಲ ಎಂದರು.
ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಕೆಲ ವಿರೋಧಿಗಳು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನೆಲ್ಲ ತಲೆಕೆಡಿಸಿಕೊಳ್ಳದೆ ನಾನು ಕ್ಷೇತ್ರದ ಜನತೆಯ ಹಿತ ಕಾಪಾಡಿ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಿ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದೇನೆ ಎಂದರು.
ಈ ಭಾಗದ ದೊಡ್ಡ ಕೆರೆಯಾದ ಸೂಳೆಕೆರೆ ಅಭಿವೃದ್ಧಿಗಾಗಿ 34 ಕೋಟಿ ರೂ. ವೆಚ್ಚದಲ್ಲಿ ಹೂಳು ತೆಗೆಯುವ ಕೆರೆ ಒತ್ತುವರಿಯನ್ನು ತೆರವುಗೊಳಿಸಿ ನಾಲಾ ವ್ಯಾಪ್ತಿಯ ಕಾಲುವೆಗಳ ಅಭಿವೃದ್ಧಿಗೆ 47 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಮದ್ದೂರು ತಾಲೂಕಿನ ಅಭಿವೃದ್ಧಿಯ ಹಿತದೃಷ್ಟಿಯಿಂದ ಕ್ಷೇತ್ರದ ಪ್ರತಿಯೊಂದು ಗ್ರಾಮಗಳಲ್ಲಿನ ಸಮಸ್ಯೆಗಳು ಹಾಗೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಈಗಾಗಲೇ ಸರ್ವೇ ನಡೆಸಲಾಗಿದ್ದು ಪ್ರತಿ ಗ್ರಾಮ ಪಂಚಾಯಿತಿಗೆ ಕನಿಷ್ಠ 5 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಮದ್ದೂರು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಬಿ.ಬಸವರಾಜು ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯದಲ್ಲಿ ಒಂದು ಮೈಲಿಗಲ್ಲು ಸೃಷ್ಟಿಸಿರುವ ಶಾಸಕ ಉದಯ್ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದೆರಡು ವರ್ಷಗಳಲ್ಲಿ ಬರೊಬ್ಬರಿ 1300 ಕೋಟಿ ರೂ.ಗೂ ಹೆಚ್ಚಿನ ಅನುದಾನಗಳನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಶಾಸಕರ ಅಭಿವೃದ್ಧಿ ಸಹಿಸದೆ ಕೆಲವರು ಅವರ ವಿರುದ್ಧ ಅಪಪ್ರಚಾರ ಮಾಡುತಿದ್ದು, ಜನತೆ ಕಿವಿಗೊಡದೆ ಮುಂಬರುವ ಸ್ಥಳೀಯ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಶಾಸಕರು ಹಾಗೂ ಪಕ್ಷ ಸೂಚಿಸಿದ ಅಭ್ಯರ್ಥಿಗಳನ್ನು ಗೆಲ್ಲಿಸಿ ಶಾಸಕರ ಕೈ ಬಲಪಡಿಸಬೇಕು ಎಂದು ತಿಳಿಸಿದರು.
ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ರಾಜೀವ್ ಮಾತನಾಡಿ, ಮದ್ದೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಸುಮಾರು 20 ವರ್ಷಗಳ ಹಿಂದೆಯಿದ್ದು ಈ ಹಿಂದೆ ಇದ್ದ ಜನಪ್ರತಿನಿಧಿಗಳು ಸಾವಿರಾರು ಕೋಟಿ ರೂ. ಅಭಿವೃದ್ಧಿ ಮಾಡಿದ್ದೇವೆ ಎನ್ನುತಿದ್ದರು. ಅಷ್ಟು ವರ್ಷಗಳಲ್ಲಿ ಮಾಡಿರುವ ಅವರ ಸಾಧನೆ ಏನು? ಶಾಸಕ ಉದಯ್ ಸಾವಿರಾರು ಕೋಟಿ ರೂ.ಗಳನ್ನು ಕ್ಷೇತ್ರಕ್ಕೆ ತಂದು ಅಭಿವೃದ್ಧಿ ಪರ್ವ ಸೃಷ್ಟಿಸಿದ್ದಾರೆ ಎಂದು ಶ್ಲಾಸಿದರು.
ಕಾವೇರಿ ನೀರಾವರಿ ನಿಗಮ ಉಪ ವಿಭಾಗದ ಕಟ್ಟಡದ ನಿವೇಶನ ದಾನಿಗಳಾದ ಅಣ್ಣೂರು ಗ್ರಾಮದ ಬಿದರಹಳ್ಳಿ ಪುಟ್ಟೇಗೌಡ ಅವರ ಪುತ್ರ ಚಂದ್ರು ಅವರನ್ನು ಶಾಸಕ ಕದಲೂರು ಉದಯ್ ಹಾಗೂ ಇಲಾಖೆ ಸಿಬ್ಬಂದಿ ಅಭಿನಂದಿಸಿ, ಸನ್ಮಾನಿಸಿದರು.
ಭಾರತಿನಗರ ಗ್ರಾಪಂ ಅಧ್ಯಕ್ಷೆ ಸೌಭಾಗ್ಯಾ ರಾಮಣ್ಣ, ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಂಜುಡೇಗೌಡ, ಎಇಇ ಪ್ರಶಾಂತ್, ಎಇ ಅವಿನಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಜ್ಜಹಳ್ಳಿ ರಾಮಕೃಷ್ಣ, ಭಾರತಿನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಮತಾ, ಯುವ ಘಟಕದ ಅಧ್ಯಕ್ಷ ಪ್ರಜಾಪ್ರಿಯ ವೆಂಕಟೇಶ್, ಎಸ್ಸಿ ವಿಭಾಗದ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ, ಗ್ರಾಪಂ ಸದಸ್ಯರಾದ ಪುಟ್ಟರಾಮು, ರವಿಚಂದ್ರ, ಮಂಜುನಾಥ್, ಕೆ.ವಿ.ಶ್ರೀನಿವಾಸ್ ಹಲವರು ಉಪಸ್ಥಿತರಿದ್ದರು.