

ಸೊರಬ: ತಾಲೂಕು ವೀರಶೈವ ಮಹಾ ಘಟಕದ ಆಯ್ಕೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಹಸ್ತಕ್ಷೇಪ ಮಾಡಿದ್ದಾರೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಗುರುಕುಮಾರ್ ಪಾಟೀಲ್ ಮಾಡಿರುವ ಆರೋಪ ಸತ್ಯಕ್ಕೆ ದೂರ. ಈ ಬಗ್ಗೆ ಬಹಿರಂಗವಾಗಿ ಕ್ಷಮೆ ಕೋರಬೇಕು ಮತ್ತು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ತಾಲೂಕು ಘಟಕದ ಕಾರ್ಯದರ್ಶಿ ವಿ.ಎ.ಬಸವರಾಜ್ ಗೌಡ ಅಗಸನಹಳ್ಳಿ ಒತ್ತಾಯಿಸಿದರು.
ಪಟ್ಟಣದ ಮುರುಘಾ ಮಠದಲ್ಲಿ ಶುಕ್ರವಾರ ತಾಲೂಕು ವೀರಶೈವ ಮಹಾಸಭಾ ಪದಾಧಿಕಾರಿಗಳ ಖಂಡನಾ ಸಭೆಯಲ್ಲಿ ಮಾತನಾಡಿದ ಅವರು, ಗುರುಕುಮಾರ ಪಾಟೀಲ್ ಅವರು ಬೆಂಗಳೂರಿನ ಹೋಟೆಲ್‌ನಲ್ಲಿ ಬಿ.ವೈ.ರಾಘವೇಂದ್ರ ಅವರ ಬಗ್ಗೆ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ದೂರಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕ ಪಕ್ಷಾತೀತವಾದುದು. ಸಮಾಜದ ಏಳಿಗೆಗಾಗಿ ಎಲ್ಲರೂ ಸಹಭಾಗಿತ್ವದಿಂದ ಮಾಡಿಕೊಂಡಿರುವ ಘಟಕ. ತಾಲೂಕು ಅಧ್ಯಕ್ಷರ ಆಯ್ಕೆ ಮಾಡುವ ಸಂದರ್ಭ ಗುರುಕುಮಾರ್ ಪಾಟೀಲ್ ಅವಿರೋಧವಾಗಿ ಆಯ್ಕೆ ಮಾಡುವುದು ಬೇಡ, ಚುನಾವಣೆ ಮೂಲಕ ಆಯ್ಕೆ ಮಾಡಬೇಕು ಎಂದು ಹೇಳಿಕೆ ನೀಡಿ ಚುನಾವಣೆಗೆ ಹೋಗಿದ್ದರು. ಆದರೆ ಈಗ ಬಿ.ವೈ.ರಾಘವೇಂದ್ರರ ಆಣತಿಯಂತೆ ವೀರಶೈವ ಮಹಾ ಘಟಕ ಕಾರ್ಯನಿರ್ವಹಿಸುವಂತೆ ಆಗಿದೆ ಎಂದು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿಗೆ ಸಹಾಯ ಕೇಳುವುದನ್ನು ಬಿಟ್ಟು ತಾಲೂಕಿನ ಅಭಿವೃದ್ಧಿ, ಸಮಾಜಕ್ಕೆ ಸಂಸದ ಬಿ.ವೈ.ರಾಘವೇಂದ್ರ ಅವರ ಕೊಡುಗೆ ಏನೂ ಇಲ್ಲ ಎಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ಕ್ಷಮೆ ಕೇಳಬೇಕು ಮತ್ತು ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಸಮಾಜದ ಮುಖಂಡರು ಸೇರಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ತಾಲೂಕು ಮಹಾಸಭಾ ಉಪಾಧ್ಯಕ್ಷ ಕೋಟ್ರೇಶ್ ಗೌಡ, ನಿರ್ದೇಶಕರಾದ ಡಿ.ಶಿವಯೋಗಿ, ವಿಜಯೇಂದ್ರಕುಮಾರ್, ಲಿಂಗರಾಜ ಗೌಡ, ಮಮತಾ ಮಲ್ಲಿಕಾರ್ಜುನ, ರೇಣುಕಮ್ಮ ಗೌಳಿ, ಕೋಟ್ರೇಶ್ ಸ್ವಾಮಿ, ಮಾಲಾ ಶಶಿಧರ, ಪ್ರಭಾವತಿ, ರಜನಿ, ರೇಖಾ ಪಾಟೀಲ್, ಕೆ.ಎಂ.ಶಶಿಧರ ಗೌಡ, ಸೋಮಪ್ಪ ಇತರರಿದ್ದರು.