

ಶಿವಮೊಗ್ಗ: ಬೆಂಗಳೂರು ಹೊರತುಪಡಿಸಿದರೆ ಅತ್ಯಂತ ಸುಸಜ್ಜಿತವಾದ ಏರ್‌ಪೋರ್ಟ್ ಶಿವಮೊಗ್ಗದಲ್ಲಿ ನಿರ್ಮಾಣವಾಗಿದೆ. ಏರ್‌ಬಸ್‌ಗಳ ಯಾನಕ್ಕೂ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಹೀಗಾಗಿ ಯೋಜನಾ ವೆಚ್ಚ ಹೆಚ್ಚಾಗಿದೆ. ಇದರ ಬಗ್ಗೆ ತನಿಖೆ ನಡೆಸಿದರೆ ನನ್ನ ಅಭ್ಯಂತರವೇನಿಲ್ಲ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಧಾನ ಪರಿಷತ್ ಕಲಾಪದ ವೇಳೆ ಮಂಜುನಾಥ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್, ವಿಮಾನ ನಿಲ್ದಾಣ ಯೋಜನೆ ಪರಿಶೀಲಿಸಿ ಅಗತ್ಯ ಬಿದ್ದರೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. 2009ರಲ್ಲಿ ಆರಂಭವಾದ ಯೋಜನೆ ಮುಕ್ತಾಯವಾಗಿದ್ದು 2023ಕ್ಕೆ. ಯೋಜನಾ ವೆಚ್ಚ ಹೆಚ್ಚುವುದು ಸಹಜ. ಬೇಕಿದ್ದರೆ ತನಿಖೆ ನಡೆಸಲಿ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಶಿವಮೊಗ್ಗದಲ್ಲೇ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದಾರೆ. ಹಿರಿಯರು, ಅನುಭವಸ್ಥರು, ವಿಮಾನ ನಿಲ್ದಾಣದ ಏಳು-ಬೀಳುಗಳನ್ನು ಕಂಡವರು. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರನ್ನೂ ಸ್ವಾಗತಿಸಿದ್ದಾರೆ. ಆದರೆ ಅವರಿಗೆ ಏರ್‌ಪೋರ್ಟ್‌ಗೆ ಖರ್ಚಾಗಿರುವ ಹಣದ ಬಗ್ಗೆ ಅನುಮಾನ ಏಕೆ ಬಂತು ಎಂಬುದೇ ಗೊತ್ತಿಲ್ಲ ಎಂದರು.
ನಾವು ಸುಮ್ಮನೇ ಇಟ್ಟಿಗೆ ಸಿಮೆಂಟ್‌ನ ಕಟ್ಟಡ ನಿರ್ಮಿಸಿಲ್ಲ. ಅಂತಾರಾಷ್ಟ್ರೀಯ ಮಾನದಂಡದ ಪ್ರಕಾರ ಏರ್‌ಪೋರ್ಟ್ ಮಾಡಿದ್ದೇವೆ. ಏಟಿಆರ್-72 ಮಾದರಿ ವಿಮಾನ ಹಾರಾಟಕ್ಕೆ ಸಿದ್ಧವಾಗಿದ್ದ ಯೋಜನೆಯನ್ನು ಏರ್‌ಬಸ್‌ಗೆ ವಿಸ್ತರಿಸಿದ ಕಾರಣ 449 ಕೋಟಿ ರೂ.ಗೆ ಯೋಜನಾ ಗಾತ್ರ ವಿಸ್ತರಣೆಯಾಗಿತ್ತು ಎಂದು ತಿಳಿಸಿದರು.
ಮೊದಲು ಸಭೆ ನಡೆಸಲಿ: ಈಗಾಗಲೇ ನಿರ್ಧಾರವಾದಂತೆ ಮುಂದಿನ ತಿಂಗಳಿನಿಂದ ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನ ಯಾನ ಆರಂಭವಾಗಬೇಕು. ಇದಕ್ಕೆ ಪೂರಕವಾಗಿ ಮೂಲ ಸೌಕರ್ಯ ಅಭಿವೃದ್ಧಿ ಸಚಿವರು ವಿಮಾನ ಯಾನ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನ ಮಾಡಬೇಕು. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಇಂಡಿಗೋ ಸಂಸ್ಥೆಗೆ ಉಡಾನ್ ಯೋಜನೆಯ ಸಬ್ಸಿಡಿ ಹಣವನ್ನೂ ನೀಡಲಾಗಿದೆ. ಈಗ ರಾಜ್ಯ ಸರ್ಕಾರ ವಿಮಾನ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಬಿ.ವೈ.ರಾಘವೇಂದ್ರ ಮನವಿ ಮಾಡಿದರು.