ಕೆಪಿಸಿಸಿಗೆ ಕಾರ್ಯಾಧ್ಯಕ್ಷರೇ ಬೇಡ: ಸಿಎಲ್ಪಿ-ಎಲ್​ಇಪಿ ಪ್ರತ್ಯೇಕಗೊಂಡರೆ ತಪ್ಪಿಲ್ಲ ಎಂದ ಜಿ.ಪರಮೇಶ್ವರ್

Parameshwar
Published on

ಬೆಂಗಳೂರು: ಪಕ್ಷಕ್ಕೆ ಒಬ್ಬ ಅಧ್ಯಕ್ಷ ಇದ್ದರೆ ಒಳ್ಳೆಯದು, ನಾಲ್ಕು ಕಾರ್ಯಾಧ್ಯಕ್ಷರು ಸೂಕ್ತವಲ್ಲ. ನನ್ನ ದೃಷ್ಟಿಯಲ್ಲಿ ಒಂದೂ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಸಬಾರದು, ಗುಂಪುಗಾರಿಕೆ ಪ್ರಾರಂಭವಾಗುತ್ತದೆ. ಇದು ಒಳ್ಳೆಯದಲ್ಲ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ.

ವಿಪಕ್ಷ ನಾಯಕ- ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ. ಪಕ್ಷದ ಹಿತದೃಷ್ಟಿಯಿಂದ ಪ್ರತ್ಯೇಕವಾದರೆ ತಪ್ಪೇನಿಲ್ಲ. ಸಿಎಲ್ಪಿ ಹೆಚ್ಚಿನದಲ್ಲ, ಎಲ್​ಒಪಿ ಹೆಚ್ಚಿನದಲ್ಲ. ಎರಡೂ ಸ್ಥಾನ ಪ್ರತ್ಯೇಕಿಸಿದರೆ ಇಬ್ಬರು ನಾಯಕರು ಹೊಂದಾಣಿಕೆ ಮಾಡಿಕೊಂಡು ಹೋಗಬೇಕಾಗುತ್ತದೆ ಎಂದು ತಿಳಿಸಿದರು.

ಎರಡು ಹುದ್ದೆ ಪ್ರತ್ಯೇಕಿಸಿದರೆ ರಾಜೀನಾಮೆ ಕೊಡುತ್ತೇನೆ ಎಂಬುದು ಸಿದ್ದರಾಮಯ್ಯರ ವೈಯಕ್ತಿಕ ಅಭಿಪ್ರಾಯ. ಅದಕ್ಕೆ ಅವರದೇ ಆದ ಕಾರಣಗಳಿರಬಹುದು. ಆದರೆ ಮಹಾರಾಷ್ಟ್ರದಲ್ಲೂ ಮಾಡಿದ್ದಾರೆ, ಇಲ್ಲೂ ಮಾಡಿದರೆ ತಪ್ಪೇನಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ, ಹಾಗಂತ ನಮ್ಮಲ್ಲೇನೂ ಗುಂಪಿಲ್ಲ. ಪಕ್ಷದ ಅಧ್ಯಕ್ಷ ಸ್ಥಾನ ನಿಭಾಯಿಸಿದ್ದೇನೆ ಅದಕ್ಕೆ ಹೇಳುತ್ತೇನೆ ಎಂದರು. ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿದ್ದು, ಕೆಪಿಸಿಸಿ ಅಧ್ಯಕ್ಷರನ್ನು ಬೇಗ ಘೋಷಣೆ ಮಾಡಿದರೆ ಒಳ್ಳೆಯದು. ಡಿ.ಕೆ.ಶಿವಕುಮಾರ್, ಎಂ.ಬಿ. ಪಾಟೀಲ್ ಹೆಸರು ಮಾಧ್ಯಮದಲ್ಲಿ ಓಡಾಡುತ್ತಿದೆ. ಇದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದರು. ನಾನು ಕರೆದಿದ್ದ ಹಿರಿಯ ನಾಯಕರ ಸಭೆಯಲ್ಲೂ ಶೀಘ್ರ ಅಧ್ಯಕ್ಷರನ್ನು ನೇಮಕ ಮಾಡಿ ಎಂದಿದ್ದೆ. ನಮ್ಮ ಮನೆಯಲ್ಲಾದ ಸಭೆ ಬಗ್ಗೆ ಜನರಲ್ ಸೆಕ್ರೆಟರಿಗೆ ಮಾಹಿತಿ ನೀಡಿದ್ದೇನೆ. ದೆಹಲಿಗೆ ಕರೆದು ಅಭಿಪ್ರಾಯ ಕೇಳುತ್ತಾರೆ ಎಂದು ಕೊಂಡಿದ್ದೆ, ಅದು ಆಗಲಿಲ್ಲ ಎಂದು ಹೇಳಿದರು.

ನಾನು ಗುಂಪುಕಟ್ಟಿಕೊಂಡು ಹೋಗಲ್ಲ

ನಾನು ವ್ಯಕ್ತಿ ಪೂಜೆ ಮಾಡುವವನಲ್ಲ. ಪಕ್ಷ ಪೂಜೆ ಮಾಡುವವನು. ಕಾಂಗ್ರೆಸ್ ಸ್ಥಾನಮಾನದ ಬಗ್ಗೆ ನಾನೇನು ಹೇಳಲ್ಲ. ಯಾರ್ಯಾರು ಏನೇನು ಎಂಬುದು ನನಗೆ ಗೊತ್ತು. ನಾನು ಗುಂಪು ಕಟ್ಟಿಕೊಂಡು ಹೋಗಲ್ಲ. ಯಾರ್ಯಾರು ಎಷ್ಟೆಷ್ಟು ಬಣ ಸೃಷ್ಟಿ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

ಸಿದ್ದು ನಡವಳಿಕೆ ವಿರುದ್ಧ ಪ್ರತಿಭಟನೆ

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಪಕ್ಷದ ಕಚೇರಿ ಮುಂದೆಯೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ, ಕೆ.ಎಸ್.ಈಶ್ವರಪ್ಪ, ವಿಶ್ವನಾಥ್ ಜತೆಗಿರುವ ಫೋಟೋ ಹಿಡಿದು ಧರಣಿ ನಡೆಸಿದ 20ಕ್ಕೂ ಹೆಚ್ಚು ಕಾರ್ಯಕರ್ತರು, ತಮ್ಮ ಅಹವಾಲು ಆಲಿಸುವಂತೆ ದೆಹಲಿ ನಾಯಕರಿಗೆ ಮನವಿ ಮಾಡಿದರು. ಇತ್ತೀಚೆಗೆ ಸಿದ್ದರಾಮಯ್ಯ ನಡವಳಿಕೆ ಸರಿಯಿಲ್ಲ. ಎಲ್ಲವೂ ನಾನೇ, ಎಲ್ಲವೂ ನನ್ನಿಂದಲೇ ಅಂತ ಹೇಳುತ್ತಿದ್ದಾರೆ. ಎಲ್ಲ ಅಧಿಕಾರ ಅನುಭವಿಸಿ ಉಳಿದ ನಾಯಕರಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net