ಕಾನೂನುಗಳನ್ನು ಮುರಿದು ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇಲ್ಲ: ಅಮೆಜಾನ್​ಗೆ ಪಿಯೂಷ್​ ಗೋಯೆಲ್​ ಪ್ರತಿಕ್ರಿಯೆ

Piyush Goyel
Published on

ನವದೆಹಲಿ: ಭಾರತದಲ್ಲಿ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸುತ್ತೇವೆ ಎಂದು ಅಮೆಜಾನ್​ ಕಂಪನಿ ಸಿಎಒ ಜೆಫ್​ ಬೆಜೊಸ್​ ಭರವಸೆ ನೀಡಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್​ ಗೋಯೆಲ್ ಕಾನೂನುಗಳನ್ನು ಮುರಿದು ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇಲ್ಲವೆಂದು ಹೇಳಿದ್ದಾರೆ.

ವಿದೇಶಿ ಕಂಪನಿಗಳು ಭಾರತದಲ್ಲಿ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನೀಡುತ್ತವೆ. ಆದರೆ, ದೇಶವು ಮುಂದೆ ಸಾಕ್ಷಿಯಾಗಲಿರುವ ಒಟ್ಟಾರೆ ಉದ್ಯೋಗ ನಷ್ಟದ ದೃಷ್ಟಿಕೋನದಿಂದ ನೋಡಬೇಕಿದೆ ಎಂದು ತಿಳಿಸಿದ್ದಾರೆ.

ಮುಂದುವರಿದು ಮಾತನಾಡಿ, ವಿದೇಶಿ ಕಂಪನಿಗಳು ಕಾನೂನನ್ನು ಮುರಿದು, ಸ್ಪರ್ಧಾತ್ಮಕ ವಿರೋಧಿ ಷರತ್ತುಗಳನ್ನು ಉಲ್ಲಂಘಿಸಿ, ಕೆಲವು ಮಾರುಕಟ್ಟೆಗಳನ್ನು ಏಕಸ್ವಾಧೀನ ಮಾಡಿಕೊಂಡು, ತನ್ಮೂಲಕ ಲಕ್ಷಾಂತರ ಉದ್ಯೋಗಗಳನ್ನು ಕಡಿತಗೊಳಸಿ, ಏಳು ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲು ಸಾಧ್ಯವಿಲ್ಲ. ಈ ಒಂದು ಅಭ್ಯಾಸ ದೇಶಕ್ಕೆ ಭಾರಿ ನಷ್ಟವನ್ನು ಉಂಟುಮಾಡುತ್ತದೆ ಎಂದಿದ್ದಾರೆ.

ನೇರ ಅಥವಾ ಪರೋಕ್ಷವಾಗಿ ಭಾರತದಲ್ಲಿ 10 ಲಕ್ಷ ಉದ್ಯೋಗಳನ್ನು 2025ರ ಒಳಗೆ ಸೃಷ್ಟಿಸಲಾಗುತ್ತದೆ ಎಂದು ಅಮೆಜಾನ್​ ಕಂಪನಿ 2020ರ ಜನವರಿ 17ರಂದು ಘೋಷಣೆ ಮಾಡಿದ ಬೆನ್ನಲ್ಲೇ ಗೋಯೆಲ್​ ಈ ಹೇಳಿಕೆ ನೀಡಿದ್ದಾರೆ. ಉದ್ಯೋಗ ಸೃಷ್ಟಿಸುವ ಬದ್ಧತೆಯನ್ನು ನೆರವೇರಿಸಲು ತಂತ್ರಜ್ಞಾನ, ಮೂಲಭೂತ ಸೌಕರ್ಯ ಮತ್ತು ಲಾಜಿಸ್ಟಿಕ್​ ಸೇರಿದಂತೆ ಇತರೆಡೆ ಬಂಡವಾಳ ಹೂಡಲು ಅಮೆಜಾನ್​ ತಿಳಿಸಿದೆ.

ನಿಮ್ಮ ಮಾತು ವಿದೇಶಿ ಬಂಡವಾಳಗಾರರಿಗೆ ತಪ್ಪು ಸಂದೇಶ ರವಾನಿಸಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೋಯೆಲ್​, ಇಲ್ಲವೇ ಇಲ್ಲ. ಭಾರತ ಮೌಲ್ಯ ಮತ್ತು ಗೌರವಯುತ ವಿದೇಶಿ ಬಂಡವಾಳವನ್ನು ಸ್ವಾಗತಿಸುತ್ತದೆ ಎಂದು ಉತ್ತರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net