ಸಂಪಾದಕೀಯ: ಭಾರತದ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಬೇಡ

Editorial 3 March 20
Published on

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತಾಗಿ ದೇಶದಲ್ಲಿ ಕಳೆದ ಹಲವು ದಿನಗಳಿಂದ ಪರ ಮತ್ತು ವಿರೋಧ ಪ್ರತಿಭಟನೆಗಳು ನಡೆಯುತ್ತಿರುವುದೇನೋ ನಿಜ. ರಾಜಧಾನಿ ದೆಹಲಿಯಲ್ಲಿ ಈ ಸಂಬಂಧ ಭುಗಿಲೆದ್ದ ಹಿಂಸಾಚಾರ ನಿಯಂತ್ರಣಕ್ಕೆ ಬಂದಿದ್ದು, ಅಲ್ಲಿನ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಶಾಹಿನ್​ಬಾಗ್​ನ ಪ್ರತಿಭಟನಾಕಾರರೊಂದಿಗೆ ಸುಪ್ರೀಂ ಕೋರ್ಟ್​ನ ಸಂಧಾನಕಾರರು ಮಾತುಕತೆ ನಡೆಸಿದ್ದಾರೆ. ಪರಿಸ್ಥಿತಿ ತಿಳಿಯಾಗುತ್ತಿದೆ. ಅಷ್ಟಕ್ಕೂ, ಈ ಕಾಯ್ದೆ ಯಾರದ್ದೇ ಪೌರತ್ವವನ್ನು ಕಿತ್ತುಕೊಳ್ಳುವುದಿಲ್ಲ ಎಂದು ಸರ್ಕಾರ ಹಲವು ಬಾರಿ ಸ್ಪಷ್ಟಪಡಿಸಿದೆ. ಬದಲಾಗಿ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಧಾರ್ವಿುಕ ಶೋಷಣೆಗೆ ಒಳಗಾಗಿ ಭಾರತಕ್ಕೆ ಶರಣಾರ್ಥಿಗಳಾಗಿ ಬಂದ ಅಲ್ಪಸಂಖ್ಯಾತರಿಗೆ (ಹಿಂದೂ, ಕ್ರೖೆಸ್ತ, ಸಿಖ್) ಪೌರತ್ವ ಒದಗಿಸುವ ಉದ್ದೇಶ ಹೊಂದಿದೆ. ಇದರಿಂದ ಭಾರತೀಯ ನಾಗರಿಕರಿಗೆ ಯಾವುದೇ ತೊಂದರೆಯಿಲ್ಲ. ಹೀಗಿದ್ದರೂ, ಕೆಲ ಶಕ್ತಿಗಳು ದುರುದ್ದೇಶಪೂರ್ವಕವಾಗಿ ಸುಳ್ಳುಗಳನ್ನು ಬಿತ್ತುವ, ವದಂತಿ ಹರಡುವ, ಇಲ್ಲಸಲ್ಲದ ಸಂಗತಿಗಳನ್ನು ಸೃಷ್ಟಿಸುತ್ತಿರುವ ಕೆಲಸದಲ್ಲಿ ನಿರತವಾಗಿವೆ. ಇವುಗಳನ್ನು ನಿಯಂತ್ರಿಸಲು ಇಲ್ಲಿನ ಪ್ರಭುತ್ವ ಹಾಗೂ ಕಾನೂನು ಸಮರ್ಥವಾಗಿದೆ. ಅಲ್ಲದೆ, ಸಿಎಎಯನ್ನು ರಾತ್ರೋರಾತ್ರಿ ಜಾರಿಗೊಳಿಸಿದ್ದೇನಲ್ಲ. ಲೋಕಸಭೆ, ರಾಜ್ಯಸಭೆಯ ಅಂಗೀಕಾರ ಪಡೆದು, ರಾಷ್ಟ್ರಪತಿಗಳ ಅಂಕಿತ ಪಡೆದುಕೊಂಡಿದೆ.

ಹೀಗಿರುವಾಗ, ವಿಶ್ವಸಂಸ್ಥೆಯ ಮಾನವಹಕ್ಕುಗಳ ಆಯೋಗ (ಖಿಘಏಇ) ಸುಪ್ರೀಂಕೋರ್ಟ್​ನಲ್ಲಿ ಸಿಎಎ ಸಂಬಂಧ ‘ಹಸ್ತಕ್ಷೇಪ ಅರ್ಜಿ’ಯನ್ನು ದಾಖಲಿಸಿದ್ದು, ಇದರ ಮಾಹಿತಿಯನ್ನು ಜಿನಿವಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ನೀಡಿದೆ. ಇದೊಂದು ವಿಚಿತ್ರ ಮತ್ತು ಅನಗತ್ಯ ಕ್ರಮ. ಸಿಎಎ ಅಂತಾರಾಷ್ಟ್ರೀಯ ವಿಷಯವಲ್ಲ, ಮಾನವ ಹಕ್ಕುಗಳ ಉಲ್ಲಂಘನೆಗೆ ಒಳಪಡುವಂಥದ್ದೂ ಅಲ್ಲ. ಇದು ಭಾರತದ ಆಂತರಿಕ ವಿಷಯ. ಅನ್ಯ ರಾಷ್ಟ್ರಗಳ ಆಂತರಿಕ ವ್ಯವಹಾರಗಳಲ್ಲಿ ಭಾರತ ಎಂದೂ ಮೂಗು ತೂರಿಸಿಲ್ಲ. ಹಾಗೆಯೇ, ತನ್ನ ದೇಶದ ಆಂತರಿಕ ವಿಷಯಗಳಲ್ಲಿ ಇತರರು ಹಸ್ತಕ್ಷೇಪ ಮಾಡುವುದನ್ನು ಸಹಿಸುವುದಿಲ್ಲ. ಆದರೂ, ಯುಎನ್​ಎಚ್​ಆರ್​ಸಿ ಅರ್ತಾಕ ಮತ್ತು ಪೂರ್ವಗ್ರಹ ಪೀಡಿತವಾಗಿ ಈ ವಿಷಯದಲ್ಲಿ ವರ್ತಿಸುತ್ತಿದ್ದು, ಸುಪ್ರೀಂ ಕೋರ್ಟ್​ಗೆ ಅರ್ಜಿ ದಾಖಲಿಸಿರುವುದು ದುರದೃಷ್ಟಕರ. ಈ ಎಲ್ಲ ಬೆಳವಣಿಗೆಗಳ ಬಗ್ಗೆ ಭಾರತದ ವಿದೇಶಾಂಗ ಇಲಾಖೆ ಖಡಕ್ ಪ್ರತಿಕ್ರಿಯೆಯನ್ನೇ ನೀಡಿದ್ದು, ‘ಸಿಎಎ ಭಾರತದ ಆಂತರಿಕ ವಿಷಯ. ಇದು ಕಾನೂನು ರೂಪಿಸುವ ಭಾರತದ ಸಂಸತ್ತಿನ ಅಧಿಕಾರಕ್ಕೆ ಸಂಬಂಧಿಸಿದ್ದಾಗಿದೆ. ಸಿಎಎ ಸಾಂವಿಧಾನಿಕವಾಗಿ ಸರಿಯಾಗಿದೆ ಮತ್ತು ಸಾಂವಿಧಾನಿಕ ಮೌಲ್ಯಗಳ ಪಾಲನೆ ಮಾಡಿದೆ. ಮತ್ತು ಕಾನೂನು ಹೋರಾಟದಲ್ಲಿ ನಮಗೆ ಗೆಲುವಾಗುವ ಸಂಪೂರ್ಣ ವಿಶ್ವಾಸವಿದೆ’ ಎಂದಿದೆ.

ಯುಎನ್​ಎಚ್​ಆರ್​ಸಿ ಯಾವುದೋ ಶಕ್ತಿಗಳ ಅಥವಾ ಕಾಣದ ಕೈಗಳ ಒತ್ತಡಕ್ಕೆ ಮಣಿದು ಇಂಥದ್ದೊಂದು ಹೆಜ್ಜೆ ಇರಿಸಿದೆಯೇ ಎಂಬ ಅನುಮಾನವೂ ಕಾಡುತ್ತಿದೆ. ಆದರೆ, ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಮತ್ತು ಬಲಿಷ್ಠ ನ್ಯಾಯಾಂಗ ವ್ಯವಸ್ಥೆ ಹೊಂದಿರುವ ಭಾರತದ ವಿದ್ಯಮಾನಗಳಲ್ಲಿ ಯಾವುದೇ ದೇಶ ತಲೆ ಹಾಕಬಾರದು. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಅತಿ ಉತ್ಸಾಹ ತೋರಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ಗೆ ಕೂಡ ಭಾರತ ಇದೇ ಉತ್ತರ ನೀಡಿದೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net