

ಬಂಗಾರಪೇಟೆ: ಗಡಿ ಭಾಗದ ಗ್ರಾಮಗಳಲ್ಲಿ ಆನೆಗಳ ಹಾವಳಿ ಹೆಚ್ಚಾಗಿರುವ ಕಡೆ ಬೆಸ್ಕಾಂ ನಿಗಾವಹಿಸಿ ಬೇಕಾಬಿಟ್ಟಿಯಾಗಿ ವಿದ್ಯುತ್ ಕಡಿತಗೊಳಿಸದೆ ನಿರಂತರವಾಗಿ ಸರಬರಾಜು ಮಾಡಬೇಕು ಎಂದು ಶಾಸಕ ಎಸ್.ಎನ್.ನಾರಾಯಣಸ್ವಾಮಿ ಬೆಸ್ಕಾಂ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಿದರು.
ಪಟ್ಟಣದ ಬೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿದ್ಯುತ್ ಪ್ರಗತಿ ಪರಿಶೀಲನೆ ಸಭೆಯಲ್ಲಿ ಎಲ್ಲ ಹೋಬಳಿಗಳ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲನೆ ನಡೆಸಿ ಮಾತನಾಡಿ, ಸರ್ಕಾರ ಸಾರ್ವಜನಿಕರಿಗೆ ಗುಣಮಟ್ಟದ ವಿದ್ಯುತ್ ನೀಡಬೇಕೆಂದು ನಿರ್ಧರಿಸಿ ವಿದ್ಯುತ್ ಪೂರೈಸುತ್ತಿದೆ. ಆದರೆ, ಕೆಲ ಹೋಬಳಿಗಳಲ್ಲಿ ಸರ್ಕಾರದ ನಿಗದಿಯಂತೆ ವಿದ್ಯುತ್ ಸರಬರಾಜಾಗದೆ ಜನರು ಪರದಾಡುವಂತಾಗಿದೆ ಎಂಬ ದೂರುಗಳು ಕೇಳಿ ಬಂದಿವೆ. ಅದರಲ್ಲೂದೋಣಿಮಡಗು ಪಂಚಾಯಿತಿ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆಯಾಟದಿಂದ ರೈತರು ತಮ್ಮ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲಾಗದೆ ಹೈರಾಣಾಗಿದ್ದಾರೆ. ಮತ್ತೊಂದು ಕಡೆ ಆನೆಗಳ ಹಾವಳಿಗೆ ತತ್ತರಿಸಿ ಹೋಗಿದ್ದಾರೆ. ಈ ಬಗ್ಗೆ ಹೆಚ್ಚು ಗಮನವಿರಲಿ ಎಂದರು.
ಪ್ರಾರಂಭದಲ್ಲಿ ಶಾಸಕರ ಪ್ರಶ್ನೆಗಳಿಗೆ ಎಇಇ ಉತ್ತರ ನೀಡಲು ಚಡಪಡಿಸಿದರು. ಇದರಿಂದ ಶಾಸಕರು ಸಿಟ್ಟಾದರು. ಎಲ್ಲದಕ್ಕೂತಮ್ಮ ಕೆಳಮಟ್ಟದ ಅಧಿಕಾರಿಗಳನ್ನು ಕೇಳಿದರೆ ಹೇಗೆ?, ಎಇಇ ಆಗಿರುವ ನಿಮಗೆ ಎಲ್ಲ ಮಾಹಿತಿ ಗೊತ್ತಿರಬೇಕು ಎಂದುಗರಂ ಆದರು.
ಇದಕ್ಕೂ ಮೊದಲು ಎಷ್ಟುಪೀಡರ್ಗಳಿವೆ?, ಎಲ್ಲಿ ಸಮಸ್ಯೆ ಇದೆ?, ಪಟ್ಟಣದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ಎಷ್ಟು ಗಂಟೆ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿಗಳು ಲೋಡ್ಶೆಡ್ಡಿಂಗ್ ಇಲ್ಲ. ನಿರ್ವಹಣೆ ಇದ್ದರೆ ಮಾತ್ರ ಕರೆಂಟ್ ಕಡಿತಗೊಳಿಸಲಾಗುವುದು. ಈಗ ಮಕ್ಕಳಿಗೆ ಪರೀಕ್ಷೆ ಸಮಯ. ವಿದ್ಯುತ್ ಕಡಿಗೊಳಿಸಿದರೆ ಓದಲು ಹಾಗೂ ನೀರಿಗೆ ಸಮಸ್ಯೆಯಾಗಲಿದೆ. ಹಾಗಾಗಿ ನಿರಂತರ ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಕಾಡಂಚಿನ ಮನೆಗಳಿಗೆ ವಿದ್ಯುತ್ ನೀಡಿ
ಕಾಡಂಚಿನಲ್ಲಿ ಕೆಲವರು ಮನೆಗಳನ್ನು ನಿಮಾರ್ಣ ಮಾಡಿಕೊಂಡು ವಾಸವಾಗಿದ್ದು, ಅಂತಹ ಮನೆಗಳಿಗೆ ಇಲಾಖೆ ವಿದ್ಯುತ್ ಸಂಪರ್ಕ ನೀಡಬೇಕು. ರಾತ್ರಿಯ ವಿದ್ಯುತ್ ಇಲ್ಲದೆ ಜನರು ಸಮಸ್ಯೆಗಳಲ್ಲಿ ಸಿಲುಕಿ ಸರ್ಕಾರವನ್ನು ಶಪಿಸುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ವಿದ್ಯುತ್ ಸಂಪರ್ಕ ಕಲ್ಪಿಸಿ ಎಂದು ಶಾಸಕರು ಸೂಚಿಸಿದರು.
ಸಭೆಯಲ್ಲಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಕವಿತಾ, ಎಇಇ ಸುಕುಮಾರ್ ರಾಜು, ಬಸವರಾಜು, ಲತಾ, ಚಂದ್ರಮೋಹನ್, ಎಇ ಗೋಪಿನಾಥ್, ಬೆಸ್ಕಾಂ ನೌಕರ ಸಂಘದ ಅಧ್ಯಕ್ಷ ಸಿ.ಬಾಬು, ಕಾರ್ಯದರ್ಶಿ ನಾಗರಾಜ್, ಉಪಾಧ್ಯಕ್ಷ ಸುಬ್ರಮಣಿ, ಕೆ.ಜಿ.ಮಂಜುನಾಥಾಚಾರಿ, ಸದಾನಂದ, ಸುರೇಶ್ ಇದ್ದರು.