

ನವದೆಹಲಿ: ಡಿಫೆನ್ಸ್ ಕ್ಯಾಂಟೀನ್ಗಳಲ್ಲಿ ಇನ್ನು ವಿದೇಶಿ ಮದ್ಯವೂ ಸೇರಿ ಆಮದು ಮಾಡಿಕೊಂಡ ಉತ್ಪನ್ನಗಳು ಸಿಗಲಾರವು. ಆಮದು ಮಾಡಿಕೊಂಡ ಫಿನಿಶ್ಡ್ ಗೂಡ್ಸ್ ಗಳನ್ನು ಡಿಫೆನ್ಸ್ ಕ್ಯಾಂಟೀನ್ಗಳಲ್ಲಿ ಮಾರಾಟ ಮಾಡುವುದಕ್ಕೆ ನಿಷೇಧ ಹೇರುವ ನಿರ್ಧಾರವನ್ನು ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್ಮೆಂಟ್ ತೆಗೆದುಕೊಂಡಿದೆ. ಈ ಆದೇಶದ ಕಾರಣ ಕ್ಯಾಂಟೀನ್ನಲ್ಲಿ ಮದ್ಯ, ಚಪ್ಪಲಿ ಸೇರಿದಂತೆ ಸುಮಾರು 420 ವಸ್ತುಗಳ ಮಾರಾಟ ಸ್ಥಗಿತಗೊಂಡಿವೆ.
ಮದ್ಯಗಳಲ್ಲಿ ಸ್ಕಾಚ್ಗಳನ್ನು ಸೀಲ್ಡ್ ಬಾಟೆಲ್ಗಳ ರೂಪದಲ್ಲಿ ತರಿಸಿಕೊಳ್ಳಲಾಗುತ್ತಿದ್ದು, ಇನ್ನು ಮುಂದೆ ಅದು ಸಿಎಸ್ಡಿಯಲ್ಲಿ ಲಭ್ಯವಿರುವುದಿಲ್ಲ. ಸಿಎಸ್ಡಿಗಳಲ್ಲಿ ಇದುವರೆಗೆ 5,500 ಸಾಮಾಗ್ರಿಗಳನ್ನು ಮಾರಾಟ ಮಾಡಲಾಗುತ್ತಿತ್ತು. ಅದರಲ್ಲಿ 420 ಸಾಮಾಗ್ರಿಗಳು ಬೇರೆ ದೇಶಗಳಿಂದ ಫಿನಿಶಡ್ ರೂಪದಲ್ಲಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಅದರಲ್ಲಿ ಹೆಚ್ಚಿನ ಪಾಲು ಚೀನಾದ ವಸ್ತುವಾಗಿತ್ತು. ಶೌಚಗೃಹ ಬ್ರಷ್ಗಳು, ಎಲೆಕ್ಟ್ರಿಕ್ ಕೆಟಲ್, ಸ್ಯಾಂಡ್ವಿಚ್ ಟೋಸ್ಟರ್, ಲ್ಯಾಪ್ಟಾಪ್, ಹ್ಯಾಂಡ್ಬ್ಯಾಗ್ ಸೇರಿ ಅನೇಕ ವಸ್ತುಗಳು ಚೀನಾದಿಂದ ಆಮದು ಆಗುತ್ತಿದ್ದು, ಇದೀಗ ಅದು ಸ್ಥಗಿತಗೊಳ್ಳಲಿದೆ.
ವಿದೇಶಗಳಲ್ಲಿ ತಯಾರಾಗಿ ಅಲ್ಲೇ ಪ್ಯಾಕ್ ಆಗಿ ಬರುವಂಥ ವಸ್ತುಗಳಿಗಷ್ಟೇ ಈ ನಿಷೇಧ ಲಾಗೂ ಆಗಿರಲಿದೆ. ವಿದೇಶಗಳಿಂದ ಸಾಮಾಗ್ರಿ ತರಿಸಿಕೊಂಡು ಭಾರತದಲ್ಲಿ ಪ್ಯಾಕ್ ಮಾಡಿರುವ ಔಷಧಕ್ಕೆ ನಿಷೇಧ ಅನ್ವಯವಾಗುವುದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ಆತ್ಮನಿರ್ಭರ ಭಾರತ ಯೋಜನೆಯ ಭಾಗವಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್)