ಸಮುದಾಯದ ಹೆಸರಿನಲ್ಲಿ ಸಭೆ ನಡೆಸಕೂಡದು: ವಿಜಯೇಂದ್ರ ಸೂಚನೆ | Don't embarrass the party

B Y Vijayendra
Published on

ಬೆಂಗಳೂರು: ವೀರಶೈವ-ಲಿಂಗಾಯತ ಸಮಾಜದ ಹೆಸರಿನಲ್ಲಿ ಸರಣಿ ಸಭೆಗಳನ್ನು ನಡೆಸಕೂಡದು ಎಂದು ಹಿತೈಷಿಗಳು, ಮುಖಂಡರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೂಚಿಸಿದ್ದು, ರೆಬೆಲ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ಗೆ ಈ ಸಭೆ ಮೂಲಕ ತಿರುಗೇಟು ನೀಡುವ ಉತ್ಸಾಹದಲ್ಲಿದ್ದ ತಂಡಕ್ಕೆ ಬ್ರೇಕ್ ಹಾಕಿದಂತಿದೆ.

ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಕೆಲವು ಹಿತೈಷಿಗಳು ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ನನ್ನ ಮೇಲಿನ ಅಭಿಮಾನದಿಂದ ವೀರಶೈವ-ಲಿಂಗಾಯತ ಸಮುದಾಯದ ಸರಣೀ ಸಭೆಗಳನ್ನು ನಡೆಸಲು ಹೊರಟಿರುವ ವಷಿಯ ಗಮನಕ್ಕೆ ತಕ್ಷಣದಲ್ಲೇ ಇದನ್ನು ನಿಲ್ಲಿಸುವಂತೆ ತಿಳಿಸಿದ್ದಾರೆ.

ಇಂತಹ ಸಭೆಗಳಿಂದ ಪಕ್ಷಕ್ಕೂ ಸಹ ಮುಜುಗರದ ಸನ್ನಿವೇಶ ಸೃಷ್ಟಿಯಾಗಲಿದೆ. ಹಿತೈಷಿಗಳು ಮತ್ತು ಅಭಿನಾಮಿಗಳು ತಮ್ಮ ಗಮನವನ್ನು ಪಕ್ಷ ಸಂಘಟನೆಯತ್ತ ಕೇಂದ್ರೀಕರಿಸಬೇಕೆ ಹೊರತು, ಸಮಾಜದ ಹೆಸರಿನಲ್ಲಿ ಸಭೆಗಳು ಸಂಘಟಿಸುವ ಪ್ರಯತ್ನಗಳನ್ನು ಈ ಕೂಡಲೇ ನಿಲ್ಲಿಸುವಂತೆ ಬಿ.ವೈ.ವಿಜಯೇಂದ್ರ ವಿನಂತಿಸಿದ್ದಾರೆ.

ದಾವಣಗೆರೆಯಲ್ಲಿ ಸಭೆ

ಬಿ.ವೈ.ವಿಜಯೇಂದ್ರ ಸೂಚನೆ ನೀಡಿದಾಗ್ಯೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಪೂರ್ವ ನಿರ್ಧಾರದಂತೆ ಸಭೆಗಳನ್ನು ಮುಂದುವರಿಸಿದ್ದಾರೆ. ದಾವಣಗೆರೆಯಲ್ಲಿ ಚಿತ್ರದುರ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವೀರಶೈವ-ಲಿಂಗಾಯತರ ಸಭೆ ನಡೆಸಿ, ಯಡಿಯೂರಪ್ಪ ಕೈಬಲಪಡಿಸಲು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕುರಿತು ಚರ್ಚಿಸಿರುವುದು ಗಮನಾರ್ಹ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net