ಸಂಪಾದಕೀಯ: ಠಾಣೆಗಳಲ್ಲಿ ಮಧ್ಯಸ್ಥಿಕೆ ಬೇಡ

hig
Published on

ಪೊಲೀಸ್ ಪರಿಭಾಷೆಯ ‘ಸೆಟ್ಲ್​ಮೆಂಟ್’ ವಿಚಾರವಾಗಿ ರಾಜ್ಯ ಹೈಕೋರ್ಟ್ ಮತ್ತೊಮ್ಮೆ ಅಸಹನೆ ಹೊರಹಾಕಿದೆ. ‘ಸಿವಿಲ್ ವ್ಯಾಜ್ಯ ತೀರ್ಮಾನ ಮಾಡುವುದಕ್ಕೆ ಪೊಲೀಸರಿಗೆ ಅಧಿಕಾರ ಕೊಟ್ಟವರಾದರೂ ಯಾರು? ಠಾಣೆಗಳನ್ನು ಸೆಟ್ಲ್​ಮೆಂಟ್ ಸೆಂಟರ್ ಮಾಡಿಕೊಳ್ಳಲಾಗಿದೆಯೆ? ಠಾಣೆಯಲ್ಲಿ ಕುಳಿತು ವಸೂಲಿ ಮಾಡುವುದು ನಿಮ್ಮ ಕೆಲಸವೇ?’ ಎಂಬ ಕಠೋರ ಅಭಿಪ್ರಾಯ ನ್ಯಾಯಪೀಠದಿಂದ ಹೊರಹೊಮ್ಮಿದೆ. ನ್ಯಾಯಪೀಠದ ಇಂಥ ಕಠೋರ ಪದಬಳಕೆ ಇದೇ ಮೊದಲಲ್ಲ, ಹತ್ತು ಹಲವು ಬಾರಿ ನ್ಯಾಯಾಲಯದಿಂದ ವ್ಯವಸ್ಥೆಗೆ ಬಿಸಿಮುಟ್ಟಿಸುವ ಇಂತಹ ಅಭಿಪ್ರಾಯ ಬಂದಿದೆ. ಸಿವಿಲ್ ವ್ಯಾಜ್ಯಗಳನ್ನು ಬಗೆಹರಿಸುವುದು ಪೊಲೀಸ್ ಠಾಣೆಯ ಕೆಲಸವಲ್ಲ ಎಂಬುದು ನ್ಯಾಯಪೀಠದ ಮಾತಿನ ಒಟ್ಟಾರೆ ಸಾರ. ಆದರೆ, ಠಾಣೆಗಳಲ್ಲಿ ಸಿವಿಲ್ ವ್ಯಾಜ್ಯಗಳ ಸೆಟ್ಲ್​ಮೆಂಟ್ ಅವ್ಯಾಹತವಾಗಿ ನಡೆದುಕೊಂಡು ಬಂದಿದೆ. ಹಿಂದೆ ಹಿರಿಯ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಠಾಣೆಗಳಿಗಾಗಿ ಕೈಪಿಡಿಯೊಂದನ್ನೇ ಹೊರಡಿಸಿ, ಸಿವಿಲ್ ವ್ಯಾಜ್ಯ ಎಂದರೆ ಯಾವುದು? ಪೊಲೀಸರಿಗೆ ಯಾವ ವ್ಯಾಜ್ಯ ಪರಿಹರಿಸಲು ಅಧಿಕಾರ ಇಲ್ಲ? ಯಾವುದನ್ನು ಬಗೆಹರಿಸಬಹುದು ಎಂದು ಸ್ಪಷ್ಟಪಡಿಸಿದ್ದರು.

ನಂತರ ಪೊಲೀಸ್ ಮಹಾನಿರ್ದೇಶಕರ ಹಂತದ ಅಧಿಕಾರಿಗಳು ಇದೇ ವಿಚಾರ ಪ್ರಚುರಪಡಿಸುತ್ತಲೇ ಬಂದಿದ್ದಾರೆ. ಆದರೆ, ಠಾಣೆಗಳು ಮಾತ್ರ ಈ ತಾಕೀತನ್ನು ಒಂದು ಕಿವಿಯಲ್ಲಿ ಕೇಳಿ ಮತ್ತೊಂದು ಕಿವಿಯಲ್ಲಿ ಬಿಡುವ ಪರಿಪಾಠ ರೂಢಿಸಿಕೊಂಡಿವೆ. ಹಿರಿಯ ಅಧಿಕಾರಿಗಳ ಮಾತನ್ನು ಗಂಭೀರವಾಗಿ ಪರಿಗಣಿಸದೆ ಪ್ರತಿನಿತ್ಯ ಸಿವಿಲ್ ವ್ಯಾಜ್ಯಗಳ ಸೆಟ್ಲ್ ಮೆಂಟ್​ಗೆ ಆದ್ಯತೆ ನೀಡುತ್ತಿವೆ. ಇದಕ್ಕೆ ಸ್ಪಷ್ಟ ಕಾರಣವೂ ಇದ್ದೇ ಇದೆ. ಸಿವಿಲ್ ವ್ಯಾಜ್ಯಗಳ ಇತ್ಯರ್ಥ ಅಂದರೆ, ಹಣಕಾಸು ವಿಚಾರ, ಭೂ ವ್ಯಾಜ್ಯ, ಚೆಕ್​ಬೌನ್ಸ್, ಬಾಡಿಗೆ ಮನೆ ತೆರವು ಹೀಗೆ ವಿವಿಧ ವಿಚಾರಗಳು ಬರುತ್ತವೆ. ಇಂತಹ ಪ್ರಕರಣ ಸಂದರ್ಭದಲ್ಲಿ ಪೊಲೀಸರು ದೂರು ಸ್ವೀಕರಿಸಿ ಎಂಡಾರ್ಸ್​ವೆುಂಟ್ (ಹಿಂಬರಹ) ನೀಡಿ ನ್ಯಾಯಾಲಯಕ್ಕೆ ಕಳಿಸಬೇಕು. ಆದರೆ ಹಾಗೆ ಆಗುತ್ತಿಲ್ಲ.

ಪೊಲೀಸ್ ಠಾಣೆಗಳು ಎರಡೂ ಪಕ್ಷಗಾರರನ್ನು ಕರೆಸಿ ಮಾತುಕತೆ ಮೂಲಕ ರಾಜಿ ಮಾಡಿಸುವ ಕೆಲಸ ಮಾಡುತ್ತಿವೆ. ಇದರಿಂದ ಅಧಿಕಾರಿಗಳ ಜೇಬು ದೊಡ್ಡ ಮಟ್ಟದಲ್ಲಿ ಭರ್ತಿಯಾಗುತ್ತದೆ ಎಂಬ ವಾದ ಜನಜನಿತ. ಸಿಆರ್​ಪಿಸಿ ಹಾಗೂ ಐಪಿಸಿ ಅರಿವಿದ್ದರೂ ಪೊಲೀಸರು ಮಾತ್ರ ರಾಜಿ ಪಂಚಾಯಿತಿ ತಮ್ಮ ಕೆಲಸದ ಭಾಗ ಎಂದೇ ಪರಿಗಣಿಸಿದ್ದಾರೆ. ಈ ಚಟುವಟಿಕೆ ಬಗ್ಗೆ ಇನ್ನೊಂದು ವಾದವೂ ಇದೆ. ಠಾಣೆಯಲ್ಲಾದರೆ ವಾರ-ಒಪ್ಪತ್ತಿನಲ್ಲಿ ಮಾತುಕತೆ ಮೂಲಕ ಪ್ರಕರಣ ಇತ್ಯರ್ಥ ಮಾಡಿಸಿಕೊಳ್ಳಬಹುದು, ವ್ಯಾಜ್ಯವನ್ನು ಕೋರ್ಟ್​ಗೆ ಒಯ್ದರೆ ಹಣ, ಸಮಯ ಎಲ್ಲವೂ ಖರ್ಚು. ಅಷ್ಟು ಸುಲಭವಾಗಿ ಕಾಲಮಿತಿಯಲ್ಲಿ ಬಗೆಹರಿಯುವುದೂ ಇಲ್ಲ ಎಂಬ ಅಭಿಪ್ರಾಯ ಸಮಾಜದಲ್ಲಿದೆ. ಹೀಗಾಗಿಯೇ ಜನರೂ ಈ ‘ಸೆಟ್ಲ್​ಮೆಂಟ್’ ವ್ಯವಸ್ಥೆಯನ್ನು ಒಪ್ಪಿಕೊಂಡಿದ್ದಾರೆ. ಪೊಲೀಸ್ ಠಾಣೆಗಳು ತಮ್ಮ ಕರ್ತವ್ಯ ಹೊರತಾದ ಸೇವೆಗೆ ಒತ್ತು ನೀಡುತ್ತಿರುವುದು ಸರಿಯಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಅದೇ ರೀತಿ ಈ ಬೆಳವಣಿಗೆಗೆ ಮೂಲಕಾರಣದ ಬಗ್ಗೆಯೂ ವ್ಯಾಪಕ ಚರ್ಚೆಯಾಗಬೇಕು, ಜನರಲ್ಲಿ ವಿಶ್ವಾಸ ಮೂಡುವಂತಹ ವ್ಯವಸ್ಥೆ ರೂಪುಗೊಳ್ಳುವ ಅಗತ್ಯವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net