

ತೀರ್ಥಹಳ್ಳಿ: ಅಬಕಾರಿ ಇಲಾಖೆಯ ಎಲ್ಲ ನೀತಿ ನಿಯಮಗಳನ್ನು ಉಲ್ಲಂಸಿ ಜನವಸತಿ ಪ್ರದೇಶದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ. ನಮ್ಮ ಮನೆಗಳಿಗೆ ತಾಗಿಕೊಂಡಂತೆ ಆರಂಭಿಸಲಿರುವ ಮದ್ಯದಂಗಡಿಗೆ ಅನುಮತಿ ನೀಡಬಾರದು ಎಂದು ಕಮ್ಮರಡಿ ಸಮೀಪದ ಹೊರಣೆಬೈಲು ಕೆಸಲೂರಿನ ಇಲಿಯಾಸ್ ಮತ್ತು ಗ್ರಾಮಸ್ಥರು ಒತ್ತಾಯಿಸಿದರು.
ಮದ್ಯದಂಗಡಿ ತೆರೆಯಲು ಉದ್ದೇಶಿಸಿರುವ ಈ ಪ್ರದೇಶದ ಅಕ್ಕಪಕ್ಕದಲ್ಲಿ 25-30 ಕೂಲಿ ಕಾರ್ಮಿಕ ಕುಟುಂಬಗಳ ನಾವು 45 ವರ್ಷಗಳಿಂದ ಬದುಕುತ್ತಿದ್ದೇವೆ. ಈ ಜಾಗದಲ್ಲಿ ಮದ್ಯದಂಗಡಿ ಆರಂಭಿಸಿದರೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುವ ಆತಂಕವಿದೆ. ಜಿಲ್ಲಾಧಿಕಾರಿ ಸೇರಿ 16 ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾರಿಂದಲೂ ಸ್ಪಂದನೆ ಇಲ್ಲ. ಹೀಗಾಗಿ ಯಾರಲ್ಲಿ ನಮ್ಮ ಗೋಳು ಹೇಳಿಕೊಳ್ಳಬೇಕು ಎಂಬುದೇ ತಿಳಿಯದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.
ಗ್ರಾಮದ ಸರ್ವೇ ನಂ.72ರಲ್ಲಿ ಉದ್ದೇಶಿತ ಮನೆಗಳಿಂದ ದೂರವನ್ನು ಹೆಚ್ಚಿಸುವ ಸಲುವಾಗಿ ರಸ್ತೆ ಮತ್ತು ಕಟ್ಟಡದ ನಡುವೆ ಕಾಂಪೌಂಡ್ ನಿರ್ಮಿಸಿ ಬದಲಿ ರಸ್ತೆಯ ದೂರದ ದಾರಿ ತೋರಿಸಲಾಗಿದೆ. ಈ ಜಾಗದಲ್ಲಿ ಅಕ್ರಮವಾಗಿ ಯಂತ್ರಗಳನ್ನು ಬಳಸಿ ಮರಗಳನ್ನು ಕಡಿಯಲಾಗಿದೆ. ಈ ಬಗ್ಗೆ ಅರಣ್ಯ ಸಂರಕ್ಷಣಾಧಿಕಾರಿಗಳು, ಎಸಿಎ್, ಆರ್‌ಎ್ಒ, ಗ್ರಾಪಂ, ಜಿಪಂ ಸಿಇಒ, ತಹಸೀಲ್ದಾರ್, ತಾಪಂ ಇಒ ಅವರಿಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.
ಈ ಪ್ರತಿಭಟನೆ ನಮ್ಮ ಕುಟುಂಬಗಳ ಸುರಕ್ಷತೆ ಮತ್ತು ಜೀವನದ ಪ್ರಶ್ನೆಯೇ ಹೊರತು ಯಾರನ್ನೂ ವಿರೋಧಿಸುವ ಉದ್ದೇಶವಿಲ್ಲ. ಸ್ಥಳ ಪರಿಶೀಲನೆ ಮಾಡಿದರೆ ಅರಿವಿಗೆ ಬರುತ್ತದೆ. ನಮ್ಮ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗುವುದು ಅನಿವಾರ್ಯ ಎಂದು ಎಚ್ಚರಿಸಿದರು.
ಸಭೆಯಲ್ಲಿ ಯಹ್ಯಾ, ಅನಿಶಾ ಇಲಿಯಾಸ್, ನಿಶ್ಮಾ, ಮಮ್ತಾಜ್ ಇತರರಿದ್ದರು.