

ಬೆಂಗಳೂರು: ದೆಹಲಿಯಲ್ಲಿ ಜ.26ರ ಗಣರಾಜ್ಯೋತ್ಸವದಂದು ನಡೆಯುವ ಸ್ತಬ್ಧಚಿತ್ರ ಪರೇಡ್ನಲ್ಲಿ ಕಳೆದ ಹದಿಮೂರು ವರ್ಷಗಳಿಂದ ನಿರಂತರವಾಗಿ ಕರ್ನಾಟಕ ಪ್ರತಿನಿಧಿಸುತ್ತಾ ಬರುತ್ತಿತ್ತು. ಆದರೆ ಈ ವರ್ಷದ ಪರೇಡ್ನಲ್ಲಿ ಭಾಗವಹಿಸುವ ಅವಕಾಶ ಕರ್ನಾಟಕಕ್ಕೆ ಸಿಕ್ಕಿಲ್ಲ. ಈ ಕುರಿತು ರಾಜ್ಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಗಣರಾಜ್ಯೋತ್ಸವ ಸ್ತಬ್ಧಚಿತ್ರದ ನೋಡಲ್ ಅಧಿಕಾರಿ ಸಿ.ಆರ್. ನವೀನ್ ಸ್ಪಷ್ಟನೆ ನೀಡಿದ್ದಾರೆ.
ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಕಳೆದ 8 ವರ್ಷಗಳಲ್ಲಿ ಭಾಗವಹಿಸುವ ಅವಕಾಶ ದೊರೆಯದ ಹಾಗೂ ಅತಿ ಕಡಿಮೆ ಬಾರಿ ಪಾಲ್ಗೊಂಡ ರಾಜ್ಯಗಳಿಗೆ ಅವಕಾಶ ನೀಡುವಂತೆ ಕೇಂದ್ರ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ ಈ ಬಾರಿ ಗಣರಾಜ್ಯೋತ್ಸದಲ್ಲಿ ಸ್ತಬ್ಧಚಿತ್ರದೊಂದಿಗೆ ಭಾಗವಹಿಸುವ ಅವಕಾಶ ದೊರೆತಿಲ್ಲ.
ಅದಲ್ಲದೆ, ಕಳೆದ ವರ್ಷದ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ರಾಜ್ಯಗಳ ಪಟ್ಟಿ ಹಾಗೂ ಈ ಬಾರಿ ಆಯ್ಕೆಯಾಗಿರುವ ರಾಜ್ಯಗಳ ಪಟ್ಟಿಯನ್ನು ಗಮನಿಸಿದರೆ, 2022ರಲ್ಲಿ ಮೊದಲ ಮೂರು ಬಹುಮಾನ ಪಡೆದ ರಾಜ್ಯಗಳು ಈ ಬಾರಿ ಆಯ್ಕೆಯಾಗಿರುವುದಿಲ್ಲ. ಅಲ್ಲದೆ ಕಳೆದ ವರ್ಷ ಭಾಗವಹಿಸಿದ್ದ ರಾಜ್ಯಗಳಲ್ಲಿ ಮೂರು ರಾಜ್ಯಗಳನ್ನು ಹೊರತು ಪಡಿಸಿದರೆ, ಇನ್ನುಳಿದ ರಾಜ್ಯಗಳು ಆಯ್ಕೆಯಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.