ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮವಿಲ್ಲ; ವಿಭಿನ್ನ ಯಂತ್ರಗಳ ಹೋಲಿಸಲಾಗಲ್ಲ; ಆರೋಗ್ಯ ಇಲಾಖೆ ಸ್ಪಷ್ಟನೆ

State-1
Published on

ಬೆಂಗಳೂರು: ಕರೊನಾ ನಿಯಂತ್ರಣಕ್ಕೆ 200 ವೆಂಟಿಲೇಟರ್​ಗಳನ್ನು ತಲಾ 18.2 ಲಕ್ಷ ರೂ. ನೀಡಿ ಖರೀದಿಸಲಾಗಿಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವಿಭಿನ್ನ ತಾಂತ್ರಿಕ ವೈಶಿಷ್ಟ್ಯೆಗೆ ಅನುಗುಣವಾಗಿ ವೆಂಟಿಲೇಟರ್ ದರದಲ್ಲಿ ಭಿನ್ನತೆಯಿರುತ್ತದೆ. ಕರ್ನಾಟಕ ರಾಜ್ಯ ಡ್ರಗ್ಸ್ ಲಾಜಿಸ್ಟಿಕ್ಸ್ ವೇರ್ ಹೌಸಿಂಗ್ ಸೊಸೈಟಿ (ಕೆಎಸ್​ಡಿಎಲ್​ಡಬ್ಲ್ಯುಎಸ್) ಮೂಲಕ ವೆಂಟಿಲೇಟರ್ ಖರೀದಿಗೆ ಬೇರೆ ಉತ್ಪಾದಕರು ಮುಂದೆ ಬಾರದ ಕಾರಣಕ್ಕೆ ಮೈಸೂರಿನ ಮೆಸರ್ಸ್ ಸ್ಕ್ಯಾನರಿ ಟೆಕ್ನಾಲಜೀಸ್ ಪ್ರೖೆ.ಲಿ. ಮೂಲಕ ತಲಾ 5,60,000 ರೂ. ಮೊತ್ತದಲ್ಲಿ 130 ವೆಂಟಿಲೇಟರ್ ಖರೀದಿಗೆ 2020ರ ಮಾ.22ರಂದು ಆರ್ಡರ್ ನೀಡಲಾಯಿತು. ಈ ಸಂಸ್ಥೆ ಇಲ್ಲಿವರೆಗೆ 80 ವೆಂಟಿಲೇಟರ್​ಗಳನ್ನು ಸರಬರಾಜು ಮಾಡಿದೆ.

2,149 ವೆಂಟಿಲೇಟರ್ ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಆರೋಗ್ಯ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. 1,600 ವೆಂಟಿಲೇಟರ್ ನೀಡಲು ಒಪ್ಪಿದ ಕೇಂದ್ರ ಸರ್ಕಾರ ಇಲ್ಲಿವರೆಗೆ 640 ಸರಬರಾಜು ಮಾಡಿದ್ದು, ಉಳಿದವು ಸರಬರಾಜು ಪ್ರಕ್ರಿಯೆಯಲ್ಲಿವೆ. ಈ ಉಪಕರಣಗಳನ್ನು ಪಿಎಂ ಕೇರ್ಸ್ ನಿಧಿಯಿಂದ ರಾಜ್ಯಕ್ಕೆ ಉಚಿತವಾಗಿ ನೀಡಲಾಗುತ್ತಿದೆ. ಕರೊನಾ ಸೋಂಕಿನ ತುರ್ತು ಪರಿಸ್ಥಿತಿಯಲ್ಲಿದ್ದ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ವೆಂಟಿಲೇಟರ್ ಸರಬರಾಜು ಇರಲಿಲ್ಲ. ಈ ಅವಧಿಯಲ್ಲಿ ವಿವಿಧ ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ 28 ಉನ್ನತ ಸಾಮರ್ಥ್ಯದ ಐಸಿಯು ವೆಂಟಿಲೇಟರ್​ಗಳನ್ನು 6 ವಿಭಿನ್ನ ಉತ್ಪಾದಕರಿಂದ ವಿಭಿನ್ನ ದರಗಳಿಗೆ ಖರೀದಿ ಮಾಡಿ ವಿತರಣೆ ಮಾಡಲಾಗಿತ್ತು. ಟ್ರಾನ್ಸ್​ಪೋರ್ಟ್ ವೆಂಟಿಲೇಟರ್​ಗಳನ್ನು ಐಸಿಯು ವೆಂಟಿಲೇಟರ್​ಗಳ ಜತೆಗೆ ಹೋಲಿಕೆ ಮಾಡುವುದು ತಪು್ಪ. ಹಾಗಾಗಿ 200 ವೆಂಟಿಲೇಟರ್​ಗಳನ್ನು ತಲಾ 18.2 ಲಕ್ಷ ರೂ. ಮೊತ್ತಕ್ಕೆ ಖರೀದಿ ಮಾಡಲಾಗಿದೆ ಎಂಬುದು ಸುಳ್ಳು ಆರೋಪ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ವೆಂಟಿಲೇಟರ್ ಸಿಗದೆ ರಾಜ್ಯದಲ್ಲಿ ಕರೊನಾ ಸೋಂಕಿತರು ಸಾಯುತ್ತಿದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್​ಗಳಿಂದ ಹಿಡಿದು ಬೆಡ್​ಗಳವರೆಗೂ ಕರೊನಾ ಚಿಕಿತ್ಸಾ ಉಪಕರಣಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ https://www.vijayavani.net/modular-icu-used-for-corona-treatment/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net