

ಬೆಂಗಳೂರು: ಸಂವಿಧಾನದ ಮೂಲ ಆಶಯಗಳಂತೆ ನಡೆಸುವ ಚಟುವಟಿಕೆಗಳನ್ನು ನಿಲ್ಲಿಸುವ ಅಥವಾ ತಡೆಯುವ ಯಾವುದೇ ಕೆಲಸವನ್ನು ಸರ್ಕಾರ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ.
ಪೊಲೀಸರು ಹಾಗೂ ಸರ್ಕಾರದ ಧೋರಣೆ ಖಂಡಿಸಿ ಕೆಲ ಸಂಘಟನೆಗಳು, ಚಿಂತಕರು, ಹಿರಿಯರು ಸೇರಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅಧಿಕೃತ ಪ್ರಕಟಣೆ ನೀಡಿ, ವಾತಾವರಣ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ಕಥೆ, ಕಾವ್ಯ, ನಾಟಕ, ಸಂಗೀತ ಮುಂತಾದ ಸೃಜನಶೀಲ ಅಭಿವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ತಡೆಯುವುದಿಲ್ಲ. ಸಂವಿಧಾನದ ಮೂಲಸ್ಫೂರ್ತಿಗೆ ವಿರುದ್ಧವಾಗದಂತೆ ನಡೆಯುವ ಎಲ್ಲ ಅಭಿವ್ಯಕ್ತಿಗಳ ಪರವಾಗಿದ್ದೇವೆ ಎಂಬ ಭರವಸೆ ನೀಡಿದ್ದಾರೆ.
ಕೆಳಹಂತದ ಪೊಲೀಸ್ ಅಧಿಕಾರಿಗಳ ತಪ್ಪು ತಿಳಿವಳಿಕೆಯ ಕಾರಣಕ್ಕೆ ಒಂದೆರಡು ಅನವಶ್ಯಕವಾದ ಗೊಂದಲಗಳು ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ಯಾವುದೇ ಗೊಂದಲಗಳು ಉಂಟಾಗದಂತೆ ನೋಡಿಕೊಳ್ಳಲು ಪೊಲೀಸ್ ಮಹಾ ನಿರ್ದೇಶಕರಿಗೆ ಸೂಕ್ತ ಸೂಚನೆ ನೀಡಿರುವೆ ಎಂದಿದ್ದಾರೆ.
ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸಗಳ ಜತೆ ಸರ್ಕಾರ ಸದಾ ನಿಲ್ಲುತ್ತದೆ. ಯಾವುದೇ ರೀತಿ ಗೊಂದಲಗಳು ಸೃಷ್ಟಿಸಬಾರದು, ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರದಲ್ಲಿ ಆತಂಕ ಬೇಡವೆಂದು ನಾಡಿನ ಜನರಿಗೆ ಸಿಎಂ ಸಿದ್ದರಾಮಯ್ಯ ವಿನಂತಿಸಿದ್ದಾರೆ.
ಪೆಲೆಸ್ತೀನ್ ಮೇಲೆ ಇಸ್ರೇಲ್ ದಾಳಿ ವಿರೋಧಿಸಿ ಬೆಂಗಳೂರು, ವಿಜಯಪುರದಲ್ಲಿ ಕೆಲ ಸಂಘಟನೆಗಳು ಹಮ್ಮಿಕೊಂಡಿದ್ದ ಕಾರ್ಯಕ್ರಮಕ್ಕೆ ಪೊಲೀಸರು ತಡೆಯೊಡ್ಡಿ, ಕಾನೂನು ಮತ್ತು ಸುವ್ಯವಸ್ಥೆ ಕಾರಣ ನೀಡಿದ್ದರು.
ರಂಗಶಂಕರದಲ್ಲಿ ಪೆಲೆಸ್ತೀನ್ ಪರವಾಗಿ ಹಾಡು, ನಾಟಕಕ್ಕೂ ಪೊಲೀಸರು ಬ್ರೇಕ್ ಹಾಕಿದ್ದು ಅನೇಕ ಮುಖಂಡರ ಕಣ್ಣು ಕೆಂಪಾಗಿಸಿತು. ಸಂವಿಧಾನ ವಿರೋಧಿ ನಡೆಯಿದು ಎಂದು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ.