

ಘಾಜಿಯಾಬಾದ್: ಉತ್ತರ ಪ್ರದೇಶದ ಘಾಜಿಯಾಬಾದ್ ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ತಬ್ಲಿಘಿ ಜಮಾತ್ನ ಕಾರ್ಯಕರ್ತರು ಅಶ್ಲೀಲವಾಗಿ ವರ್ತಿಸಿ, ಬೆತ್ತಲೆಯಾಗಿ ಆಸ್ಪತ್ರೆಯೊಳಗೆ ಅಡ್ಡಾಡುತ್ತಿದ್ದಾರೆ ಎಂಬ ಆರೋಪ ಇರುವ ಹಿನ್ನೆಲೆಯಲ್ಲಿ, ಅವರ ವೈದ್ಯಕೀಯ ಸೇವೆಗೆ ಮಹಿಳಾ ಆರೋಗ್ಯ ಸಿಬ್ಬಂದಿ ಮತ್ತು ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನೇಮಿಸುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ತಿಳಿಸಿದ್ದಾರೆ.
ಇಲ್ಲಿಯ ಎಂಎಂಜಿ ಆಸ್ಪತ್ರೆಯಲ್ಲಿರುವ ತಬ್ಲಿಘಿ ಜಮಾತ್ ಕಾರ್ಯರ್ತರು ಅಸಭ್ಯವಾಗಿ ವರ್ತಿಸುತ್ತಿರುವ ಕುರಿತಂತೆ ಸ್ಥಳೀಯ ಪೊಲೀಸರಿಗೆ ಘಾಜಿಯಾಬಾದ್ ಮುಖ್ಯ ವೈದ್ಯಕೀಯ ಅಧಿಕಾರಿ ಪತ್ರವೊಂದನ್ನು ಬರೆದಿದ್ದರು. ತಬ್ಲಿಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರಿಗೆ ಕರೊನಾ ಸೋಂಕು ತಗುಲಿರಬಹುದೆಂಬ ಶಂಕೆಯಿಂದ ಈ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ಗಳಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಆದರೆ, ಅವರು ಬೆತ್ತಲೆಯಾಗಿ ಅಶ್ಲೀಲ ಹಾಡುಗಳನ್ನು ಕೇಳುತ್ತಾ ಮನಸೋ ಇಚ್ಛೆ ಓಡಾಡುತ್ತಿದ್ದಾರೆ. ಅವರೆಲ್ಲ ಆಸ್ಪತ್ರೆಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಪುರುಷರನ್ನು ಮಾತ್ರ ಇವರ ಸೇವೆಗೆ ಕಳುಹಿಸಲಾಗುವುದು ಎಂದಿದ್ದಾರೆ. ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪಿಗಳ ವಿರುದ್ಧ ರಾಷ್ಟ್ರೀಯ ಸುರಕ್ಷತಾ ಕಾಯ್ದೆ (ಎನ್‌ಎಸ್) ಅಡಿ ದೂರು ದಾಖಲು ಮಾಡಲು ಯೋಗಿ ಸರ್ಕಾರ ನಿರ್ಧರಿಸಿದೆ. ‘ಇವರು ಮಾನವೀಯತೆಯ ಶತ್ರುಗಳು. ಕಾನೂನನ್ನು ಪಾಲನೆ ಮಾಡುತ್ತಿಲ್ಲ. ಮಹಿಳೆಯರ ಮೇಲೆ ಅವರು ಮಾಡಿರುವ ಕೃತ್ಯ ಅತ್ಯಂತ ಹೀನಾಯವಾದುದು. ಇದನ್ನು ನಾವು ಸಹಿಸುವುದಿಲ್ಲ’ ಎಂದಿದ್ದಾರೆ.
ಮಹಿಳೆಯರ ಮೇಲೆ ಅಸಹ್ಯವಾಗಿ ನಡೆದುಕೊಂಡಿರುವುದೂ ಅಲ್ಲದೆ, ಹೌಸ್ಕೀಪಿಂಗ್ ಸಿಬ್ಬಂದಿ ಬಳಿಯೂ ಸಿಗರೇಟ್ ಕೇಳಿದ್ದಾರೆ. ಇಂತಹ ಸಮಯದಲ್ಲಿ ಇವರಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. (ಏಜೆನ್ಸೀಸ್)