ಅವಿಶ್ವಾಸ ಮಂಡನೆ ಸಭೆಯಿಂದ ಭಯವಿಲ್ಲ

TTH ASADI
ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ
Published on

ತೀರ್ಥಹಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿ ಕಳೆದ 14 ತಿಂಗಳುಗಳಿಂದ ಪಪಂ ಅಧ್ಯಕ್ಷನಾಗಿ ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಆದರೆ ನನ್ನ ವಿರುದ್ಧ ಸ್ವಪಕ್ಷೀಯ ಸದಸ್ಯರೇ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ ತಿರುಗೇಟು ನೀಡಿದರು.

ನನ್ನ ಅಧಿಕಾರ ಅವಧಿಯಲ್ಲಿ ಪಕ್ಷಕ್ಕೆ ಹೆಸರು ತರುವಂತೆ ಕೋಟ್ಯಂತರ ರೂ. ಅನುದಾನವನ್ನು ತಂದು ಕಾಮಗಾರಿಗಳನ್ನು ನಿರ್ವಹಿಸಿದ್ದೇನೆ. ಪಕ್ಷದ ಕೆಲ ಮುಖಂಡರಿಗೆ ನಾನು ಬಕೆಟ್ ಹಿಡಿಯಲಿಲ್ಲ ಎಂಬ ಕಾರಣಕ್ಕೆ ಅಧಿಕಾರ ಹಸ್ತಾಂತರದ ನೆಪದಲ್ಲಿ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ನಾನು ಮಾಡಿರುವ ಅಪರಾಧ ಏನೆಂಬುದೇ ತಿಳಿಯುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ನಾನು ಕಾಂಗ್ರೆಸ್ ಪಕ್ಷಕ್ಕೆ ಇಂದಿಗೂ ನಿಷ್ಠನಾಗಿಯೇ ಇದ್ದೇನೆ. ಅ.18ರಂದು ನಿಗದಿಯಾಗಿರುವ ಅವಿಶ್ವಾಸ ಮಂಡನೆಯ ಸಭೆ ಸಂದರ್ಭ ಸದಸ್ಯರಿಗೆ ವಿಪ್ ಜಾರಿಗೊಳಿಸುವ ಗೊಡ್ಡು ಬೆದರಿಕೆಗೆ ಬಗ್ಗುವುದಿಲ್ಲ. ಬಿಜೆಪಿ ಪಕ್ಷದಲ್ಲಿದ್ದ ನಾನು ಆರ್.ಎಂ.ಮಂಜುನಾಥ ಗೌಡ ಅವರ ಸಹಕಾರದಿಂದ ಕಾಂಗ್ರೆಸ್ ಸೇರಿದವನು. ಬೇರೆಯವರಿಗಿಲ್ಲದ ನಿಯಮ ನನ್ನ ವಿಚಾರದಲ್ಲಿ ಪಾಲನೆಗೆ ಪಕ್ಷ ಮುಂದಾಗಿದ್ದು, ಪಶ್ಚಾತ್ತಾಪ ಪಡುವ ದಿನ ದೂರವಿಲ್ಲ. ನನ್ನ ಹೋರಾಟ ಮುಂದುವರಿಯಲಿದೆ ಎಂದರು.

1995ರ ನಂತರ ಮೊದಲ ಬಾರಿಗೆ ಪಪಂನಲ್ಲಿ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ಅಧಿಕಾರ ಹಸ್ತಾಂತರಕ್ಕೆ ಎರಡು ತಿಂಗಳ ಹೆಚ್ಚಿನ ಅವಧಿ ನೀಡುವಂತೆ ಪಕ್ಷದ ಮುಖಂಡರಲ್ಲಿ ಕೇಳಿದ್ದೆ. ಆದರೆ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ ನಂತರವೂ ನನ್ನ ವಿರುದ್ಧ ನಡೆದಿರುವ ಬೆಳವಣಿಗೆ ಬೇಸರ ತಂದಿದೆ. ನನ್ನ ವಿರುದ್ಧ ಷಡ್ಯಂತ್ರ ನಡೆಸಿರುವ ಕಾಂಗ್ರೆಸ್ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಹೇಳಿದರು.

ಪಪಂ ಸದಸ್ಯರಾದ ಸುಶೀಲಾ ಶೆಟ್ಟಿ ಮತ್ತು ನಮೃತ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net