ಪ್ಲಾಸ್ಮಾ ಚಿಕಿತ್ಸೆ ಇನ್ನೂ ಪ್ರಾಯೋಗಿಕ ಹಂತದಲ್ಲಿ: ಏನಿದು ಚಿಕಿತ್ಸೆ?

Plasma
Published on

ನವದೆಹಲಿ: ಕರೊನಾ ವಾಸಿ ಮಾಡಲು ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗಬಹುದೇ ಎಂಬುದು ಇನ್ನೂ ಪ್ರಯೋಗದ ಹಂತದಲ್ಲಿದೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಾಷ್ಟ್ರೀಯ ಅಧ್ಯಯನ ನಡೆಸುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಸ್ಪಷ್ಟಪಡಿಸಿದೆ. ವಾಸ್ತವವಾಗಿ ಪ್ಲಾಸ್ಮಾ ಚಿಕಿತ್ಸೆ ರೋಗಿಯ ‘ಪ್ರಾಣಕ್ಕೂ ಎರವಾಗಬಹುದು’ ಎಂದು ಅದು ಹೇಳಿದೆ.

ದೆಹಲಿಯಲ್ಲಿ ಮೊದಲ ಪ್ಲಾಸ್ಮಾ ಚಿಕಿತ್ಸೆ ಯಶಸ್ವಿಯಾಗಿದ್ದರಿಂದ ಚಿಗುರಿಕೊಂಡಿದ್ದ ಆಶಾವಾದದ ನಡುವೆಯೇ ಕೇಂದ್ರ ಸರ್ಕಾರದ ಈ ಸ್ಪಷ್ಟನೆ ಹೊರ ಬಿದ್ದಿದೆ. ಕರೊನಾ ವಾಸಿಪಡಿಸಲು ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾದುದು ಎಂಬುದಕ್ಕೆ ಯಾವುದೇ ನಿರ್ದಿಷ್ಟ ಪುರಾವೆ ಸಿಕ್ಕಿಲ್ಲ ಎಂದು ಸಚಿವಾಲಯದ ಹಿರಿಯ ಅಧಿಕಾರಿ ಲವ ಅಗರ್​ವಾಲ್ ಸುದ್ದಿಗಾರರಿಗೆ ತಿಳಿಸಿದರು. ‘ಪ್ಲಾಸ್ಮಾ ಚಿಕಿತ್ಸೆಯನ್ನು ಎಚ್ಚರದಿಂದ ಮಾಡದಿದ್ದರೆ ರೋಗಿ ಮೃತಪಡುವ ಸಾಧ್ಯತೆಯೂ ಇದೆ’ ಎಂದರು.

ಪ್ಲಾಸ್ಮಾ ಚಿಕಿತ್ಸೆಯ ಪರಿಣಾಮವನ್ನು ತಿಳಿಯಲು ದೇಶದಾದ್ಯಂತ ಕ್ಲಿನಿಕಲ್ ಪರೀಕ್ಷೆ ನಡೆಸುವಂತೆ ಐಸಿಎಂಆರ್ ಸಲಹೆ ಮಾಡಿದೆ. ಕರೊನಾ ವ್ಯಾಧಿ ಮಾನವರಿಗೆ ಸಂಪೂರ್ಣವಾಗಿ ಹೊಸದಾದ ರೋಗವಾಗಿರುವುದರಿಂದ ಪ್ಲಾಸ್ಮಾ ಥೆರಪಿ ಕೂಡ ರೋಗ ಗುಣಪಡಿಸಲು ಪ್ರಯತ್ನಿಸಲಾಗುತ್ತಿರುವ ವಿಧಾನಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಪ್ಲಾಸ್ಮಾ ಚಿಕಿತ್ಸೆಯ ಪರೀಕ್ಷೆ ನಡೆಸುವುದಿದ್ದರೂ ವೆಂಟಿಲೇಟರ್ ಸಹಾಯದಿಂದ ಇರುವ ತೀರಾ ಗಂಭೀರ ಸ್ಥಿತಿಯಲ್ಲಿರುವ ಕರೊನಾ ರೋಗಿಗಳ ಮೇಲಷ್ಟೆ ನಡೆಸಬಹುದಾಗಿದೆ ಎಂದು ಐಸಿಎಂಆರ್ ಖಡಕ್ ಆಗಿ ಹೇಳಿದೆ.

ಯಶಸ್ವಿ ಚಿಕಿತ್ಸೆ: ದೆಹಲಿಯಲ್ಲಿ ಪ್ಲಾಸ್ಮಾ ಚಿಕಿತ್ಸೆಯಿಂದ 49 ವರ್ಷದ ಕರೊನಾ ರೋಗಿಯೊಬ್ಬರು ಗುಣಮುಖರಾದ ಬಗ್ಗೆ ಕಳೆದ ವಾರ ವರದಿಯಾಗಿತ್ತು. ಇದು ದೇಶದ ಪ್ರಥಮ ಪ್ರಕರಣವಾಗಿದೆ.

ಏನಿದು ಚಿಕಿತ್ಸೆ?

ಚೇತರಿಸಿಕೊಂಡ ಕರೊನಾ ವೈರಸ್ ರೋಗಿಯ ಪ್ಲಾಸ್ಮಾವನ್ನು ಗಂಭೀರ ರೋಗಿಗೆ ವರ್ಗಾಯಿಸುವುದು ಈ ಪ್ಲಾಸ್ಮಾ ಚಿಕಿತ್ಸೆಯ ಪ್ರಮುಖ ಅಂಶವಾಗಿದೆ. ವಾಸಿಯಾದ ವ್ಯಕ್ತಿಯ ರಕ್ತದಲ್ಲಿ ಪ್ರತಿಕಾಯ ಹೇರಳವಾಗಿರುವುದರಿಂದ ಗಂಭೀರವಾಗಿರುವ ರೋಗಿ ಗುಣಮುಖರಾಗಲು ನೆರವಾಗಬಹುದೆಂದು ನಿರೀಕ್ಷಿಸಲಾಗಿದೆ.

ಕರೊನಾ ಸಮರ ಗೆದ್ದ ನ್ಯೂಜಿಲೆಂಡ್

ವೆಲ್ಲಿಂಗ್ಟನ್: ಕೆಲ ದೇಶಗಳಲ್ಲಿ ಕರೊನಾ ಪರಿಣಾಮ ಕಡಿಮೆಯಾಗತೊಡಗಿದ್ದು, ನ್ಯೂಜಿಲೆಂಡ್ ಆ ಪಟ್ಟಿಯಲ್ಲಿ ಸೇರಿಕೊಂಡಿದೆ. ದೇಶದಲ್ಲಿ ಕಳೆದ ಒಂದು ವಾರದಿಂದ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿದಿದೆ. ನಾವು ವೈರಸ್​ನ್ನು ಸಂಪೂರ್ಣವಾಗಿ ಗೆದ್ದಿದ್ದೇವೆಂದಲ್ಲ. ಆದರೆ ಆ ಹಾದಿಯಲ್ಲಿದ್ದೇವೆ ಎಂದು ಪ್ರಧಾನಿ ಜಸಿಂಡಾ ಅರ್ಡೆರ್ನ್ ತಿಳಿಸಿದ್ದಾರೆ. ಮಾರ್ಚ್ 23ರಿಂದ ದೇಶದಲ್ಲಿ ಹೇರಲಾಗಿದ್ದ ಲಾಕ್​ಡೌನ್​ನಲ್ಲಿ ಸಡಿಲಿಕೆ ಮಾಡಲಾಗಿದ್ದು, 4 ಲಕ್ಷ ಉದ್ಯೋಗಿಗಳಿಗೆ ಕಚೇರಿಗೆ ತೆರಳುವುದಕ್ಕೆ ಅನುಮತಿ ನೀಡಲಾಗಿದೆ. ಶೇ.75 ಆರ್ಥಿಕತೆಯನ್ನು ಪುನರಾರಂಭ ಮಾಡುವುದಾಗಿ ಪ್ರಧಾನಿ ತಿಳಿಸಿದ್ದಾರೆ. ದೇಶದಲ್ಲಿ ಫೆ. 28ರಂದು ಮೊದಲ ಕರೊನಾ ಪ್ರಕರಣ ಪತ್ತೆಯಾಗಿದ್ದು ಇದುವರೆಗೆ ಒಟ್ಟು 1472 ಪ್ರಕರಣಗಳು ಪತ್ತೆಯಾಗಿವೆ. 19 ಸೋಂಕಿತರು ಮೃತರಾಗಿದ್ದು, ಈಗಾಗಲೇ 1214 ಸೋಂಕಿತರು ಗುಣಮುಖರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net