ನವರಾತ್ರಿ ದುರ್ಗಾ ಪೂಜೆ ಪೆಂಡಾಲ್​ಗಳಿಗೆ ಆಯೋಜಕರಿಗಷ್ಟೇ ಪ್ರವೇಶ; ಹೈಕೋರ್ಟ್ ಆದೇಶ

Untitled-1
Published on

ಕೋಲ್ಕತ: ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನಡೆಯುವ ಪೆಂಡಾಲ್​ಗಳಿಗೆ ಆಯೋಜಕರಿಗಷ್ಟೇ ಅವಕಾಶ ನೀಡಬೇಕು. ಹೊರಗಿನವರಿಗೆ ಅಲ್ಲಿ ಪ್ರವೇಶ ಕಲ್ಪಿಸಬಾರದು ಎಂಬುದಾಗಿ ಹೈಕೋರ್ಟ್ ಆದೇಶ ನೀಡಿದೆ.

ಚಿಕ್ಕ ಪೆಂಡಾಲ್​ಗಳಲ್ಲಿ ಜನರಿಗೆ ಐದು ಮೀಟರ್ ಹಾಗೂ ದೊಡ್ಡ ಪೆಂಡಾಲ್​ಗಳಲ್ಲಿ ಹತ್ತು ಮೀಟರ್​ ದೂರದಿಂದಲೇ ದೇವರ ದರ್ಶನ ಪಡೆಯುವಂತೆ ಸೂಚಿಸಬೇಕು. ಮಾತ್ರವಲ್ಲ ಪೂಜೆ ಹಿನ್ನೆಲೆಯಲ್ಲಿ ನಡೆಯುವ ಜನಜಂಗುಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಆಯೋಜಕರು ಮುಂಚಿತವಾಗಿಯೇ ಒಂದು ಬ್ಲೂಪ್ರಿಂಟ್​ ನೀಡಬೇಕು ಎಂದು ಕೋಲ್ಕತದ ಉಚ್ಚ ನ್ಯಾಯಾಲಯ ಆದೇಶಿಸಿದೆ.

ಆಯೋಜಕರಷ್ಟೇ ಪೆಂಡಾಲ್​ಗೆ ಪ್ರವೇಶಿಸಬಹುದಾಗಿದ್ದು, ಅಂಥವರ ಹೆಸರನ್ನು ಪೆಂಡಾಲ್​ ಹೊರಗೆ ನಮೂದಿಸಿರಬೇಕು. ಪೆಂಡಾಲ್​ ಆವರಣದಲ್ಲಿ ಗರಿಷ್ಠ 25 ಜನರಿಗಷ್ಟೇ ಅವಕಾಶ ಇರಲಿದೆ ಎಂಬುದಾಗಿ ಕೋರ್ಟ್ ನಿರ್ದೇಶನ ನೀಡಿದೆ. ಈ ಆದೇಶ ಕೋಲ್ಕತದ 34 ಸಾವಿರ ನೋಂದಾಯಿತ ದುರ್ಗಾ ಪೂಜಾ ಪೆಂಡಾಲ್​ಗಳಿಗೆ ಅನ್ವಯಿಸಲಿದ್ದು, ಈ ವರ್ಷ ಅಲ್ಲಿ ಅಕ್ಟೋಬರ್​ 23ರಿಂದ 26ರವರೆಗೆ ದುರ್ಗಾಪೂಜೆ ನಡೆಯಲಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net