ಸಂಶಯವೇ ಬೇಡ

Untitled design (2)
Published on
ನಂದನ ಜೊತೆ ಉದ್ಧವನ ಮಾತು ಮುಂದುವರಿದಿದೆ. ‘ವಿಶ್ವದ ಜೀವಿಗಳ ಹಸಿವನ್ನು ನೀಗಿಸಬಲ್ಲ ಆ ಪರಮಾತ್ಮನಿಗೇ ನೀವು ಊಟ ಹಾಕುತ್ತೀರಿ. ಹಾಲು ಕುಡಿಸುತ್ತೀರಿ ಎಂದರೆ ಎಂತಹ ಭಾಗ್ಯ ನಿಮ್ಮದು. ಇನ್ನು ಏನು ಉಳಿದಿದೆ ನೀವು ಮಾಡುವುದು. ದೇವರು ನಿಮ್ಮ ಮೇಲೆ ಅನುಗ್ರಹ ಮಾಡಿದ್ದಾನೆಯೇ ಎಂದು ಕೇಳುತ್ತೀರಲ್ಲ? ಮಾಡದೇ ಏನು ಮಾಡುತ್ತಾನೆ ?ಆದ್ದರಿಂದ ಯಾವ ವಿಧವಾದ ಸಂದೇಹವೂ ನಿಮಗೆ ಬೇಡ. ಬೇರೆ ಯಾವ ವಿಚಾರವನ್ನೂ ಮಾಡಬೇಡಿ. ಅವನು ಇಲ್ಲಿ ಇಲ್ಲ ಅಂತ ನೀವು ತಿಳಿಯುತ್ತಿದ್ದೀರಿ. ಅದೊಂದು ತಪ್ಪನ್ನು ಮಾತ್ರ ಮಾಡಬೇಡಿ’ ಎನ್ನುತ್ತಾನೆ ಉದ್ಧವ.

ಅಂತರ್ಹೃದಿ ಸ ಭೂತಾನಾಮಾಸ್ತೇ| (10.1.46.36 ಭಾಗವತ)

ಶ್ರೀಕೃಷ್ಣ ಪರಮಾತ್ಮ ಎಲ್ಲರ ಹೃದಯದೊಳಗೆ ಇದ್ದಾನೆ. ನಿಮ್ಮನ್ನು ಬಿಟ್ಟು ಅವನು ಎಲ್ಲಿಯೂ ಹೋಗಿಲ್ಲ. ಅವನಿಗೆ ಯಾರೂ ಬೇಕಾದವರಿಲ್ಲ, ಯಾರು ಬೇಡಾದವರೂ ಇಲ್ಲ, ದ್ವೇಷ್ಯರಿಲ್ಲ. ಅವರವರ ಗುಣ, ಅವರವರ ಯೋಗ್ಯತೆ, ಅವರವರ ಕರ್ಮಗಳಿಗೆ ಅನುಗುಣವಾಗಿ ಅವರ ಮೇಲೆ ಭಗವಂತ ಪ್ರೀತಿ ತೋರುತ್ತಾನೆ. ಹಾಗೊಮ್ಮೆ ಇಲ್ಲ ಅಂದರೆ ಅವರು ಯಾರಾದರೂ ಸರಿ ಅವರನ್ನು ದ್ವೇಷ ಮಾಡುತ್ತಾನೆ. ಭಗವಂತ ಅವರಿಗೆ ಶಿಕ್ಷೆಯನ್ನು ಕೊಡುತ್ತಾನೆ.

ಹಾಗೆಂದು ತನ್ನವನು ಏನೇ ಮಾಡಲಿ ಅವನು ತನ್ನವನು ಅನ್ನುವುದಕ್ಕಾಗಿ ಅವನನ್ನು ಪರಮಾತ್ಮ ಸ್ವೀಕಾರ ಮಾಡುತ್ತಾನೆ, ಇಲ್ಲದೇ ಇದ್ದರೆ ಬಿಡುತ್ತಾನೆ ಎಂದಲ್ಲ. ಆದರೆ ಒಂದಂತೂ ಸ್ಪಷ್ಟ. ದೇವರು ಯಾರನ್ನು ತನ್ನವರು ಎಂದು ಸ್ವೀಕಾರ ಮಾಡುತ್ತಾನೆಯೋ ಅವನು ಗುಣವಂತನು ಆಗಿರಲೇಬೇಕು, ಯೋಗ್ಯತಾಶಾಲಿ ಆಗಿರಲೇಬೇಕು. ಹಾಗಿಲ್ಲ ಎಂದರೆ ಅವರನ್ನು ತನ್ನವರನ್ನಾಗಿ ಪರಮಾತ್ಮ ಸ್ವೀಕಾರ ಮಾಡುವುದೇ ಇಲ್ಲ. ಆದ್ದರಿಂದ ನಿಮ್ಮನ್ನು ಸ್ವೀಕಾರ ಮಾಡಿದ್ದಾನೆ ಎಂದರೆ ನೀವು ನಿಜವಾಗಿಯೂ ಪರಮ ಯೋಗ್ಯರು. ನಿಮ್ಮ ಉದ್ದಾರ ಆಗುವುದು ನಿಶ್ಚಿತ ಎಂಬುದಾಗಿ ಉದ್ಭವ ಹೇಳುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net