

ಬೆಂಗಳೂರು: ಯಾವುದೇ ರೋಗವಿಲ್ಲ, ಆಪರೇಷನ್ ಅಗತ್ಯವೂ ಇಲ್ಲ ಎಂದು ಬಿಜೆಪಿ ಮಾಜಿ ಮಂತ್ರಿ ರಾಜೂಗೌಡ (ರಾಜಾ ನರಸಿಂಹ ನಾಯಕ) ಹೇಳುವ ಮೂಲಕ ‘ಆಪರೇಷನ್ ಹಸ್ತ’ವನ್ನು ತಳ್ಳಿಹಾಕಿದರು. ಸುದ್ದಿಗಾರರಿಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಆತ್ಮೀಯ ಚಿತ್ರನಟ ಸುದೀಪ್ ಜನ್ಮದಿನದ ನಿಮಿತ್ತ ಏರ್ಪಡಿಸಿದ್ದ ಔತಣಕೂಟಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಬಂದಿದ್ದರು.
ಆಕಸ್ಮಿಕ ಭೇಟಿ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ಪಾಟೀಲ್ ಜತೆಗೆ ಸೇರಿ ಔಪಚಾರಿಕವಾಗಿ ಚರ್ಚೆ ಮಾಡಿದ್ದು, ಈ ಸಂದರ್ಭದಲ್ಲಿ ರಾಜಕೀಯ ವಿಚಾರವೇ ಪ್ರಸ್ತಾಪವಾಗಿಲ್ಲ. ಕಾಂಗ್ರೆಸ್‌ನಲ್ಲೇ ಎಲ್ಲವೂ ಸರಿಯಿಲ್ಲ, ಅವರದೇ ಪಕ್ಷದ ಶಾಸಕರು ಅಸಮಾಧಾನಿತರಾಗಿ ಪತ್ರ ಬರೆಯುತ್ತಿದ್ದಾರೆ. ಇಷ್ಟಕ್ಕೂ ಕಾಂಗ್ರೆಸ್‌ನಿಂದ ಯಾವುದೇ ಆಹ್ವಾನ ಬಂದಿಲ್ಲ, ಯಾರೂ ಸಂಪರ್ಕಿಸಿಲ್ಲ ಎಂದರು.
ಬಿಜೆಪಿಯಿಂದ ನನಗೆ ಎಲ್ಲವೂ ದೊರೆತಿದೆ, ಅದೇ ರೀತಿ ಪಕ್ಷಕ್ಕೂ ಸೇವೆ ಸಲ್ಲಿಸಬೇಕು. ಅಧಿಕಾರದಲ್ಲಿದ್ದಾಗ ಮಾತ್ರವಲ್ಲ, ಇಲ್ಲದಿರುವಾಗಲೂ ಪಕ್ಷದ ಜತೆಗಿರಬೇಕು. ಬಿಜೆಪಿ ಬಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ರಾಜೂಗೌಡ ಸ್ಪಷ್ಟಪಡಿಸಿದರು.
ರಾಯಚೂರು ಕ್ಷೇತ್ರದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಈ ಬಾರಿಯೂ ಅವರನ್ನೇ ಅಭ್ಯರ್ಥಿ ಮಾಡಿ, ನಾವೆಲ್ಲ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದು ಪಕ್ಷದ ನಾಯಕರಿಗೆ ತಿಳಿಸಿದ್ದೇವೆ ಎಂದರು.
ಅಮರೇಶ್ವರ ನಾಯಕ ಪರ ಬ್ಯಾಟಿಂಗ್ ಮಾಡಿದ ರಾಜೂಗೌಡ, ಅಭ್ಯರ್ಥಿ ಆಯ್ಕೆ ಹಾಗೂ ಟಿಕೆಟ್ ಹಂಚಿಕೆಗೆ ಸಾಕಷ್ಟು ಕಾಲಾವಕಾಶವಿದೆ. ಈಗಲೇ ಅದರ ಬಗ್ಗೆ ಚರ್ಚೆ ಅನಗತ್ಯ, ವರಿಷ್ಠರ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿಬೇಕಾಗುತ್ತದೆ ಎಂದು ರಾಜೂಗೌಡ ಉತ್ತರಿಸಿದರು.